

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಸ್ಥಗಿತಗೊಂಡಿರುವ ದಸರಾ ಮಹೋತ್ಸವವನ್ನು ರಾಜ್ಯ ಸರ್ಕಾರದಿಂದಲೇ ಆಚರಣೆ ಮಾಡುವ ನಿರೀಕ್ಷೆ ನನಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಪ್ರತಿಭಟನಾನಿರತ ಕಲಾವಿದರಿಗೆ ಭರವಸೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾ ಕಲಾವಿದರ ಬಳಗದ ವತಿಯಿಂದ ಗುರುವಾರ ಆಯೋಜಿಸಿದ್ದ ಪ್ರತಿಭಟನಾ ಸ್ಥಳಕ್ಕೆ ಡಿಸಿ ಶ್ರೀರೂಪಾ ಆಗಮಿಸಿದರು. ಈ ವೇಳೆ ಮಾತನಾಡಿದ ಅವರು, ಜಿಲ್ಲಾ ದಸರಾ ಮಹೋತ್ಸವ ಆಯೋಜನೆಗಾಗಿ ಕಲಾವಿದರು ಪ್ರತಿಭಟನೆ ಮಾಡುತ್ತಿರುವ ವಿಷಯ ತಿಳಿದ ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿದೆ. ಅವರು ತುರ್ತಾಗಿ ಪ್ರಸ್ತಾವನೆ ಕಳುಹಿಸಿಕೊಡಿ ಎಂದು ಹೇಳಿದ್ದಾರೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯ ಸರ್ಕಾರದಿಂದ ಅನುಮತಿ ದೊರೆಯುವ ನಿರೀಕ್ಷೆ ನನಗಿದೆ ಎಂದರು ಹೇಳಿದರು.
ನಾನು ಸರ್ಕಾರಕ್ಕೆ ಬರೆದಿರುವ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೂ ಕಳುಹಿಸಿ ಮಾತನಾಡಿದ್ದೇನೆ. ಅವರೂ ಕೂಡ ಸಚಿವರಾದ ಶಿವರಾಜ ತಂಗಡಗಿ ಅವರೊಂದಿಗೆ ಮಾತನಾಡುತ್ತೇನೆ ಎಂದಿದ್ದಾರೆ. ಜಿಲ್ಲಾ ದಸರಾ ಮಹೋತ್ಸವ ನಡೆಯುವ ಸಕಾರಾತ್ಮಕ ವಿಶ್ವಾಸವಿದೆ. ಎರಡ್ಮೂರು ದಿನ ಕಾದುನೋಡೋಣ ಎಂದರು.
ಇದಕ್ಕೂ ಮೊದಲು ಪ್ರತಿಭಟನಾನಿರತ ಕಲಾವಿದರು ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಹಿರಿಯ ಕಲಾವಿದೆ ಹೊನ್ನಮ್ಮ ಮಾತನಾಡಿ, ಜಿಲ್ಲಾ ದಸರಾ ಮಹೋತ್ಸವ ಆಯೋಜನೆ ಮಾಡದೆ ಇದ್ದರೆ ಮುಂದಿನ ಎಲ್ಲ ಚುನಾವಣೆಗಳಲ್ಲೂ ಕಲಾವಿದರು ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದರು. ಚಿತ್ರನಟ ರಮೇಶ್ ದಡದಹಳ್ಳಿ ಮಾತನಾಡಿ, ಸ್ಥಳೀಯ ಕಲಾವಿದರಲ್ಲಿ ಕೆಲವರು ಪೋಟೋ ಪ್ರಿಯರಿದ್ದಾರೆ. ಇಂತಹ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪ್ರತಿಭಟನೆಗೆ ಬಂದು ದಸರಾ ಆಯೋಜನೆ ಮಾಡಲು ಕೋರುತ್ತಿರುವವರು ಸಣ್ಣ ಕಲಾವಿದರು. ಅದರಲ್ಲೂ ಬಡ ಮಹಿಳಾ ಕಲಾವಿದರು. ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ. ನಗರದ ಪ್ರವೇಶ ದ್ವಾರದಲ್ಲಿ ಅಳವಡಿಸಿರುವ ಜಾನಪದ ಕಲೆಗಳ ತವರೂರು ಸ್ವಾಗತ ಕಮಾನನ್ನು ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಕಿತ್ತು ಬಿಸಾಕಬೇಕು. ಜಾನಪದ ಕಲಾವಿದರಿಗೆ ದಸರಾ ಮಾಡದೆ ಇದ್ದ ಮೇಲೆ ಕಲೆಗಳ ತವರೂರು ಎಂದು ಏಕೆ ಕರೆಯಬೇಕು ಎಂದು ಪ್ರಶ್ನಿಸಿದರು.
ಯುವ ಕಲಾವಿದ ಆದರ್ಶ್ ಯರಗಂಬಳ್ಳಿ ಮಾತನಾಡಿ, ಮೈಸೂರು, ತುಮಕೂರು, ಕೊಡಗು, ಜಿಲ್ಲೆಗಳಲ್ಲಿ ದಸರಾ ಮಾಡಲಾಗುತ್ತಿದೆ. ಆದರೆ ಚಾಮರಾಜನಗರದ ಕಲಾವಿದರು ದಸರಾ ಮಾಡಿ ಎಂದು ಬೀದಿಗೆ ಬಂದು ಕೂತಿದ್ದಾರೆ. ಜಿಲ್ಲಾಡಳಿತದ ತಾತ್ಸಾರದಿಂದ ಈ ನಡೆ ಅನುಸರಿಸಲಾಗುತ್ತಿದೆ. ಇಲ್ಲಿ ಶೋಷಿತ ಸಮುದಾಯದ ಕಲಾವಿದರು ಇದ್ದಾರೆ ಎಂದು ನಿರ್ಲಕ್ಷ್ಯ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮುಂದಿನ ಚುನಾವಣಗೆ ಮತ ಕೇಳಲು ಮನೆ ಬಾಗಿಲಿಗೆ ಬಂದಾಗ ನಮ್ಮನ್ನು ಬೀದಿನಲ್ಲಿ ನಿಲ್ಲಿಸಿರುವುದನ್ನು ಕೇಳಬೇಕು ಎಂದು ಹೇಳಿದರು. ಪ್ರತಿಭಟನೆ ಮುಂದುವರೆಯುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಸ್ಥಳಕ್ಕೆ ಭೇಟಿ ನೀಡಿ ಕಲಾವಿರಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ಅಂತ್ಯಗೊಳಿಸಲಾಯಿತು.
ಈ ವೇಳೆ ಕಲಾವಿದರಾದ ಮಂಗಲ ಹೊಸೂರು ಶಿವಣ್ಣ, ಸಿದ್ದರಾಜು, ಮಂಜು, ರಾಜಮ್ಮ, ಭಾಗ್ಯಮ್ಮ, ಚಿನ್ನಮ್ಮ, ಸಿದ್ದರಾಜು, ಶಿವಶಂಕರ್ ಚಟ್ಟು , ಶಿವು ಜನ್ನೂರು ಹೊಸೂರು, ಕೆಂಪರಾಜು, ಮಹೇಶ್ ಮತ್ತು ಇತರರು ಪಾಲ್ಗೊಂಡಿದ್ದರು.