

ಕೊಳ್ಳೇಗಾಲ: ಮುಖ್ಯಮಂತ್ರಿಯಾದ ಬಳಿಕ ಪ್ರಥಮವಾಗಿ ಡಿ.ಕೆ.ಶಿವಕುಮಾರ್ ಅವರು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲು ಸೆ.30 ರಂದು ಆಗಮಿಸುತ್ತಿದ್ದು, ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವ ಸಿ.ಪುಟ್ಟರಂಗಶೆಟ್ಟಿ ಶೆಟ್ಟಿ ಹೇಳಿದರು.
ಭಾನುವಾರ ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಗೆ ಅಗತ್ಯವಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಅಂದು ಸಿಎಂಗೆ ಮನವರಿಕೆ ಮಾಡಲಾಗುತ್ತದೆ. ಹೆಚ್ಚಿನ ಅನುದಾನ ನೀಡಲು ಮನವಿ ಮಾಡಲಾಗುತ್ತದೆ. ಯಳಂದೂರಿನ ಹೊಸಹಳ್ಳಿ ಕೆರೆ ನೀರು ತುಂಬಿಸುವುದು, ವೈಕೆ ಮೋಳೆ, ಉಪ್ಪಿನ ಮೋಳೆ ಬಳಿ ಬೈಪಾಸ್ ರಸ್ತೆ ನಿರ್ಮಿಸಬೇಕಿದೆ. ಶಾಸಕ ಎ.ಆರ್.ಕೃಷ್ಣ ಮೂರ್ತಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದರೆ ನಾನೂ ಕೂಡ ಕ್ಯಾಬಿನೆಟ್‌ನಲ್ಲಿ ಪ್ರಾಸ್ತಾಪಿಸಿ ಅನುದಾನ ಪಡೆದು ಕೆಲ ತಿಂಗಳಲ್ಲಿಯೇ ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.
1.250 ಕೋಟಿ ರೂ.ಕಾಮಗಾರಿಗಳಿಗೆ ಚಾಲನೆ: ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅಗರ ಮತ್ತು ಮದ್ದೂರು ಕೆರೆಗಳಲ್ಲಿ ನೀರು ಸಂಗ್ರಹಕ್ಕಾಗಿ ಜಲಾಶಯ ನಿರ್ಮಿಸಿ ಕರ್ನಾಟಕ ಕೈಗಾರಿಕ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಕಾಮಗಾರಿ, ಯಳಂದೂರಿನಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಉದ್ಘಾಟನೆ, ಕೊಳ್ಳೇಗಾಲದಲ್ಲಿ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ತಾಪಂ, ಜಿ.ಪಂ ಚುನಾವಣೆ ನಡೆಯಲಿದೆ. ನಂತರ ಗ್ರಾಪಂ, ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದೆ. ಟಿಕೆಟ್ ಆಕಾಂಕ್ಷಿಗಳು ಇಂದಿನಿಂದಲೇ ಸ್ಥಳೀಯವಾಗಿ ಪಕ್ಷ ಸಂಘಟನೆ ಮಾಡಬೇಕು. ಸಿಎಂ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆ ತರಬೇಕು. ಸಾಮಾಜಿಕ ನ್ಯಾಯದಡಿ ಮುಂದೆ 8 ಬ್ಲಾಕ್‌ಗಳಿಗೂ ಅಧ್ಯಕ್ಷರ ಆಯ್ಕೆಯಾಗುತ್ತದೆ ಎಂದರು.
ಮಾಜಿ ಶಾಸಕರಾದ ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯೋಗೇಶ್, ಮಾಜಿ ಅಧ್ಯಕ್ಷ ಮರಿಸ್ವಾಮಿ, ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಡಗೆರೆ ದಾಸಣ್ಣ, ಕೊಳ್ಳೇಗಾಲ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜೇಂದ್ರ, ಯಳಂದೂರು ತಾಲೂಕು ಅಧ್ಯಕ್ಷ ಪ್ರಭುಪ್ರಸಾದ್, ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕಂದ ವರ್ಮ, ರಾಮಪುರ ಬ್ಲಾಕ್ ಅಧ್ಯಕ್ಷ ಈಶ್ವರ್, ಯೋಗೇಶ್, ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಚೇತನ್ ದೊರೈರಾಜ್, ಮುಖಂಡರಾದ ಕೊಪ್ಪಳಿ ಮಹದೇವ ನಾಯಕ, ಕೃಷ್ಣ, ಲೋಕೇಶ್, ಕೇತಮ್ಮ, ಲತಾ ಮತ್ತಿತರರಿದ್ದರು.
ವೇದಿಕೆ ಪರಿಶೀಲನೆ: ಸಭೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಎಂಜಿಎಸ್‌ವಿ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಕಾರ್ಯಕ್ರಮದ ವೇದಿಕೆಯ ಸಿದ್ಧತೆ ಕಾರ್ಯಗಳನ್ನು ಪರಿಶೀಲಿಸಿದರು. ನಂತರ, ಮಹದೇಶ್ವರ ಕಾಲೇಜಿನ ಹೆಲಿಪ್ಯಾಡ್ ಸ್ಥಳವನ್ನು ವೀಕ್ಷಣೆ ಮಾಡಿದರು. ಜಿ.ಪಂ ಸಿಇಒ ಮೋನಾ ರೋತ್, ಎಸ್ಪಿ ಮುತ್ತುರಾಜ್ ಇತರರಿದ್ದರು.