ಮ. ಬೆಟ್ಟದಲ್ಲಿ ಮಂಜು, ತುಂತುರು ಮಳೆ

ಮಂಜು ಆವರಿಸಿದ್ದರಿಂದ ವಾಹನ ಸಂಚಾರಕ್ಕೆ ಪರದಾಟ
ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟದ ಮಾರ್ಗದಲ್ಲಿ ಆವರಿಸಿದ್ದ ಮಂಜಿನಿಂದ ವಾಹನ ಸವಾರರು ಹೆಡ್‌ಲೈಟ್ ಬಳಸಿ ಚಲಿಸಿದರು.
ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟದ ಮಾರ್ಗದಲ್ಲಿ ಆವರಿಸಿದ್ದ ಮಂಜಿನಿಂದ ವಾಹನ ಸವಾರರು ಹೆಡ್‌ಲೈಟ್ ಬಳಸಿ ಚಲಿಸಿದರು.
Published on: 

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ಸಾಧಾರಣ ಮಳೆಯಾಯಿತು. ಆವರಿಸಿದ್ದ ವಿಪರೀತ ಮಂಜಿನಿಂದ ವಾಹನ ಚಾಲಕರು ಹಾಗೂ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಯಿತು.

ಮ.ಬೆಟ್ಟದಲ್ಲಿ ಬೆಳಗ್ಗೆ 6ರಿಂದ 10 ಗಂಟೆವರೆಗೂ ತುಂತುರು ಹನಿಗಳ ಜತೆಗೆ ಆಗಾಗ್ಗೆ ಸಾಧಾರಣ ಪ್ರಮಾಣದಲ್ಲಿ ಮಳೆಯಾಯಿತು. ಇದರಿಂದ ರಸ್ತೆಯಲ್ಲಿ ನೀರು ಹರಿಯಿತು. ಭಕ್ತರು ಮಳೆ ನಡುವೆಯೇ ವಿವಿಧ ಉತ್ಸವಾದಿ ಸೇವೆ ಹಾಗೂ ಹರಕೆ ಸೇವೆಗಳಲ್ಲಿ ಭಾಗಿಯಾಗಿದ್ದರು. ತಾಳುಬೆಟ್ಟದಿಂದ ಮ.ಬೆಟ್ಟದ ಮಾರ್ಗದಲ್ಲಿ ತೆರಳುತ್ತಿದ್ದ ಕೆಲ ಕಾಲ್ನಡಿಗೆಯ ಭಕ್ತರು ಮರದಡಿ ನಿಂತರೆ ಬಹುತೇಕರು ನೆನೆದುಕೊಂಡೇ ಸಾಗಿದರು.

ಇತ್ತ ಬೆಳಗ್ಗೆ 10.30ರವರೆಗೂ ಅರಣ್ಯ ಪ್ರದೇಶದಿಂದ ಕೂಡಿರುವ ತಾಳುಬೆಟ್ಟದಿಂದ ಮ.ಬೆಟ್ಟದವರೆಗೂ ತುಂತುರು ಹನಿಗಳ ಜತೆಗೆ ವಿಪರೀತ ಮಂಜು ಆವರಿಸಿತ್ತು. ರಸ್ತೆ ಸ್ಪಷ್ಟವಾಗಿ ಕಾಣದ ಪರಿಣಾಮ ವಾಹನ ಸವಾರರು ಹೆಡ್‌ಲೈಟ್ ಹಾಕಿಕೊಂಡು ನಿಧಾನವಾಗಿ ಚಲಿಸಿದರು. ತೀವ್ರ ತಿರುವುಗಳಲ್ಲಿ ಸಂಚರಿಸಲು ಹರಸಾಹಸ ಪಟ್ಟರು. ಬೈಕ್ ಸವಾರರು ವಾಹನಗಳ ಹಿಂದೆ ಸಂಚರಿಸುವಂತಾಗಿತ್ತು. ಇನ್ನು ಆನೆತಲೆ ದಿಂಬದ ಬಳಿ ಕಾಣಿಸುತ್ತಿದ್ದ ಮ.ಬೆಟ್ಟದ ಸಂಪೂರ್ಣ ಚಿತ್ರಣ ಸಂಪೂರ್ಣ ಮಂಜಿನಿಂದ ಆವೃತವಾಗಿತ್ತು. 10.30ರ ಬಳಿಕ ಶ್ರೀಕ್ಷೇತ್ರದ ವಾತಾವರಣ ತಿಳಿಯಾಯಿತು.

ಅಪಾಯಕ್ಕೆ ಆಹ್ವಾನಿಸುತ್ತಿದೆ ಕಂದಕ

ಮಹದೇಶ್ವರ ಬೆಟ್ಟದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆಣೆಹೊಲದ ತಿರುವಿನ ಸಮೀಪದಲ್ಲಿ ರಸ್ತೆ ಬದಿಯ ಮಣ್ಣು ಕುಸಿದು ಕಂದಕ ನಿರ್ಮಾಣವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ಸ್ಥಳದಲ್ಲಿ ರಸ್ತೆಯು ಕಿರಿದಾಗಿದ್ದು, ಚಾಲಕರು ಜಾಗರೂಕತೆಯಿಂದ ಸಂಚರಿಸಬೇಕಿದೆ. ಅಧಿಕಾರಿಗಳು ಇತ್ತ ಗಮನಹರಿಸಿ ಅನಾಹುತ ಸಂಭವಿಸುವ ಮೊದಲು ಗುಂಡಿ ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.