ಬಹುಬೆಳೆಗೆ ಹನಿ ನೀರಿನ ರಕ್ಷಣೆ

ಕಾಳನಹುಂಡಿ ರೈತ ವಸಂತ್‌ಕುಮಾರ್ ಕೃಷಿ ಕಾಯಕ
ಚಾಮರಾಜನಗರ ತಾಲೂಕಿನ ಕಾಳನಹುಂಡಿ ಗ್ರಾಮದ ರೈತ ವಸಂತ್‌ಕುಮಾರ್ ಅವರ ತೋಟದಲ್ಲಿ ಬೆಳೆದಿರುವ ಬಾಳೆ, ಅಡಿಕೆ, ತೆಂಗಿನ ಬೆಳೆಗಳು
Published on: 

ಚಾಮರಾಜನಗರ: ಬರದ ನಡುವೆ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಸವಾಲು ರೈತರಿಗೆ ಎದುರಾಗಿದ್ದು, ಈ ಪರಿಸ್ಥಿತಿಯಲ್ಲಿ ಬಹುಬೆಳೆ ಕೃಷಿ ಮಾಡುತ್ತಿರುವ ರೈತರೊಬ್ಬರಿಗೆ ಹನಿ ನೀರಾವರಿ ನೆರವಾಗಿದೆ.

ತಾಲೂಕಿನ ಕಾಳನಹುಂಡಿ ಗ್ರಾಮದ ವಸಂತಕುಮಾರ್ 6.5 ಎಕರೆ ಜಮೀನಿನಲ್ಲಿ ತೆಂಗು, ಬಾಳೆ, ಅಡಿಕೆ ಕೃಷಿ ಮಾಡುತ್ತಿದ್ದು, ಬೋರ್‌ವೆಲ್ ಮೂಲಕ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿರುವುದರಿಂದ ಈ ಬರದಲ್ಲೂ ಬೆಳೆಗಳ ಜೀವ ಉಳಿದುಕೊಂಡಿದೆ. 300ಕ್ಕೂ ಹೆಚ್ಚು ತೆಂಗುಗಳಿವೆ. ಇದರಲ್ಲಿ 90ಕ್ಕೂ ಹೆಚ್ಚು ಸಸಿಗಳಿವೆ. 200ಕ್ಕೂ ಹೆಚ್ಚು ನೇಂದ್ರ ಬಾಳೆ, 2 ಸಾವಿರ ಅಡಿಕೆ ಮರಗಳಿವೆ. 20 ತೇಗ, 8 ಕಿರಳೀಕಾಯಿ ಗಿಡಗಳಿವೆ. ಇವುಗಳನ್ನು ಒಂದೇ ತಾಕಿನಲ್ಲಿ ಬೆಳೆಯಾಗಿದ್ದು, ಇತ್ತೀಚೆಗೆ ಉತ್ತಮ ಮಳೆಯಾಗಿರುವುದರ ಪರಿಣಾಮ ಗಿಡಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಒಂದೇ ಮಾದರಿಯ ಬೆಳೆಗೆ ಜೋತು ಬೀಳುವ ಬದಲು ಬಹು ಬೆಳೆಗಳ ತೋಟವನ್ನು ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ನೇಂದ್ರ ಬಾಳೆ ಗೊನೆಗಳು ಕಚ್ಚಿವೆ. ಇದಕ್ಕೂ ಮೊದಲು ಹಾಕಿದ್ದ ಏಲಕ್ಕಿ ಬಾಳೆಯೂ ಜಮೀನಿನಲ್ಲಿ ಹಾಗೆಯೇ ಇಳಿದುಕೊಂಡಿವೆ. ಜಿಲ್ಲೆಯಲ್ಲಿ ಬಾಳೆ ಪ್ರಮುಖ ಕೃಷಿಯಾಗಿದೆ. ನೇಂದ್ರ ಬಾಳೆ ಬೆಳೆಯುವ ರೈತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಪಕ್ಕದ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ನೇಂದ್ರಬಾಳೆಯನ್ನು ರ್ತು ಮಾಡಲಾಗುತ್ತದೆ. ಆದರೆ ನೇಂದ್ರ ಬಾಳೆಯನ್ನು ಸಾವಯವ ವಿಧಾನದಲ್ಲಿ ಬೆಳೆಯುವ ರೈತರು ಕಡಿಮೆ ಇದ್ದಾರೆ. ಆರೋಗ್ಯಕರ ಆಹಾರ ಉತ್ಪಾದನೆ ಮಾಡಬೇಕೆಂಬ ಉದ್ದೇಶದಿಂದ ಅನೇಕ ರೈತರು ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಿದ್ದು, ವಸಂತ್‌ಕುಮಾರ್ ನೇಂದ್ರ ಬಾಳೆ ಕೃಷಿಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಇವರ ತೋಟ ನೋಡಲು ಸಾಧಾರಣವಾಗಿ ಕಂಡರೂ ಬೆಳೆಗಳ ಆರೋಗ್ಯ ಪೂರ್ಣವಾಗಿವೆ. ಇದಕ್ಕೆ ಸಾವಯವ ವಿಧಾನವನ್ನು ಅನುಸರಿಸುತ್ತಿರುವುದೂ ಕಾರಣವಾಗಿದೆ.

ಕಳೆಯೇ ಗೊಬ್ಬರ: ಹಲವು ಕಡೆ ಕಳೆ ತ್ಯಾಜ್ಯವನ್ನು ತೆಗೆದು ಹಾಕಲು ಔಷಧಿ ಮತ್ತು ರಾಸಾಯನಿಕ ಗೊಬ್ಬರ ಬಳಕೆ ಮಾಡಲಾಗುತ್ತಿದೆ. ಆದರೆ, ರೈತ ವಸಂತ್‌ಕುಮಾರ್ ಅವರ ಜಮೀನಿನಲ್ಲಿ ಕಳೆಯನ್ನೇ ಗೊಬ್ಬರವಾಗಿ ಬಳಕೆ ಮಾಡಲಾಗುತ್ತಿದೆ. ಸಾವಯವ ಕೃಷಿಯಲ್ಲಿ ಕಳೆ ಸಸ್ಯಗಳನ್ನು ಭೂಮಿಯಲ್ಲಿ ಕೊಳೆಸಿ ಪೋಷಕಾಂಶವಾಗಿ ಮಾರ್ಪಾಡು ಮಾಡಲಾಗುತ್ತಿದೆ. ಈ ವಿಧಾನವನ್ನು ಅನುಸರಿಸುತ್ತಿರುವ ರೈತ ವಸಂತ್‌ಕುಮಾರ್ ಬೆಳೆಯ ತ್ಯಾಜ್ಯಗಳಾದ ತೆಂಗು ಮತ್ತು ಅಡಿಕೆ ಗರಿಗಳನ್ನು ಭೂಮಿಯಲ್ಲೇ ಬಿಡುತ್ತಿದ್ದಾರೆ. ಭೂಮಿಯನ್ನು ಉಳುಮೆ ಮಾಡದೆ ಕಳೆ ಸಸ್ಯಗಳನ್ನು ಕತ್ತರಿಸಿ ಬೆಳೆಗಳ ನಡುವೆ ಹಾಕಿ ಕೊಳೆಸುತ್ತಿದ್ದಾರೆ. ಇದರಿಂದ ಮಣ್ಣಿನಲ್ಲಿ ತೇವಾಂಶ ಕೂಡಿರುತ್ತದೆ. ಲವತ್ತತೆ ವೃದ್ಧಿಯಾಗುತ್ತಿದೆ. ಎರೆಹುಳುಗಳ ಉತ್ಪಾದನೆ ಚೆನ್ನಾಗಿದೆ. ಮುಖ್ಯವಾಗಿ ಕಳೆ ತ್ಯಾಜ್ಯದ ಸಮರ್ಪಕ ನಿರ್ವಹಣೆಯ ವಿಧಾನ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಇದರಿಂದ ರೈತನಿಗೆ ಹಣಕಾಸು ಉಳಿಯತಾಯವೂ ಆಗುತ್ತಿದೆ. ಅಲ್ಲದೇ, ಕೊಟ್ಟಿಗೆ ಗೊಬ್ಬರವನ್ನು ತಂದು ಬೆಳೆಗಳಿಗೆ ಹಾಕುತ್ತಿದ್ದಾರೆ.

ದೂರಗಾಮಿ ಹುಣಸೆ ಕೃಷಿ :

ರೈತ ವಸಂತ್‌ಕುಮಾರ್ ಪಾರಂಪರಿಕ ಕೃಷಿಯಾಗಿರುವ ಹುಣಸೆ ಬೇಸಾಯವನ್ನೂ ಮಾಡುತ್ತಿದ್ದಾರೆ. 4 ಎಕರೆ ಜಮೀನಿನಲ್ಲಿ 80 ಮರಗಳಿವೆ. 1970ರಲ್ಲಿ ನೆಟ್ಟ ಗಿಡಗಳು ಈಗ ಹೆಮ್ಮರಗಳಾಗಿ ಬೆಳೆದು ನಿಂತಿವೆ. ಹುಣಸೆ ಮಳೆಯಾಶ್ರಿತ ಮರವಾಗಿದೆ. ಹನಿ ನೀರಾವರಿ ಪದ್ಧತಿಯಲ್ಲಿ ಜಲ ಸೌಲಭ್ಯ ಕೊಟ್ಟರೆ ಎಲೆಗಳು ಚೆನ್ನಾಗಿ ಬರುತ್ತವೆ. ಆದರೆ ಹುಣಸೆ ಕಾಯಿ ಕಚ್ಚುವುದು ಕಡಿಮೆಯಾಗುತ್ತದೆ. ಹೀಗಾಗಿ 4 ಎಕರೆ ಜಮೀನಿನಲ್ಲಿ ಬೆಳೆದಿರುವ ಹುಣಸೆಗೆ ಹೆಚ್ಚುವರಿ ನೀರಿನ ಸೌಲಭ್ಯವನ್ನು ಕೊಡುತ್ತಿಲ್ಲ. ಮಳೆಯನ್ನೇ ಆಶ್ರಯಿಸಿವೆ. ಹುಣಸೆ ಕೃಷಿ ಮಾಡಲು ಅಧಿಕ ಪ್ರಮಾಣದಲ್ಲಿ ಭೂಮಿ ಇರಬೇಕು. ಕಾಯುವ ತಾಳ್ಮೆಯೂ ಮುಖ್ಯ. ಕಡಿಮೆ ಜಮೀನು ಇರುವ ರೈತರು ಹುಣಸೆ ಕೃಷಿ ಮಾಡಲು ಸಾಧ್ಯವಿಲ್ಲ. ಆದರೆ ಜಮೀನಿನಲ್ಲಿ ಒಂದೋ ಅಥವಾ ಎರಡೂ ಹುಣಸೆ ಮರಗಳನ್ನು ಬೆಳೆಸಬೇಕು. ಇದರಿಂದ ಬೇರೆ ಬೆಳೆಗಳಿಗೂ ಅನುಕೂಲವಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹುಣಸೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಲಾಭ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಹುಣಸೆ ಕೃಷಿ ಮಾಡುತ್ತಿರುವ ಕೆಲವೇ ಕೆಲವು ರೈತರಲ್ಲಿ ವಸಂತ್‌ಕುಮಾರ್ ಅವರೂ ಒಬ್ಬರಾಗಿದ್ದಾರೆ. ಅವರ ಪೂರ್ವಿಕರು ನೆಟ್ಟ ಗಿಡಗಳು ಮರಗಳಾಗಿ ಬೆಳೆದು ಆ ಪರಂಪರೆಯನ್ನು ನೆನಪು ಮಾಡುತ್ತಿವೆ.

ಹವಾಮಾನ ವೈಪರಿತ್ಯದ ನಡುವೆ ಬೆಳೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ನನ್ನ ಜಮೀನಿನಲ್ಲಿ ಬಾಳೆ, ಅಡಿಕೆ, ತೆಂಗು ಹಾಕಿದ್ದೇನೆ. ಬೋರ್‌ವೆಲ್ ನೀರು ಇದ್ದಿದ್ದರಿಂದ ಬರದಲ್ಲಿ ಹನಿ ನೀರಾವರಿ ಮೂಲಕ ಬೆಳೆಗಳನ್ನು ರಕ್ಷಣೆ ಮಾಡಿಕೊಂಡಿದೆ. ತೋಟಗಳಲ್ಲಿ ಏಕ ಬೆಳೆ ಮಾಡುವ ಬದಲು ಬಹುಬೆಳೆ ಮಾಡುವುದು ಸೂಕ್ತ. ಭೂಮಿಯನ್ನು ಉಳುಮೆ ಮಾಡದೆ ಕಳೆ ಸಸ್ಯವನ್ನು ಭೂಮಿಯಲ್ಲೇ ಕೊಳೆಸಿ ಗೊಬ್ಬರ ಮಾಡುತ್ತಿದ್ದೇನೆ.

ವಸಂತ್‌ಕುಮಾರ್, ರೈತ, ಕಾಳನಹುಂಡಿ, ಚಾಮರಾಜನರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net