ಪ್ರಜಾಸೌಧ, ಉಪ ನೋಂದಣಾಧಿಕಾರಿ ಕಚೇರಿಗೆ ಶಂಕು ನಾಳೆ

ಹನೂರು ಜನರ ಹಲವು ವರ್ಷಗಳ ಕನಸು ನನಸು
ಹನೂರು ಸಮೀಪದ ಹುಲ್ಲೇಪುರದಲ್ಲಿ ಪ್ರಜಾಸೌಧ ನಿರ್ಮಿಸಲು ಉದ್ದೇಶಿಸಿರುವ ಸ್ಥಳ.
ಹನೂರು ಸಮೀಪದ ಹುಲ್ಲೇಪುರದಲ್ಲಿ ಪ್ರಜಾಸೌಧ ನಿರ್ಮಿಸಲು ಉದ್ದೇಶಿಸಿರುವ ಸ್ಥಳ.
Published on: 

ಹನೂರು: ಪ್ರಜಾಸೌಧ ಹಾಗೂ ಉಪ ನೋಂದಣಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೆ.30 ರಂದು ಸಿಎಂ ಡಿ.ಕೆ ಶಿವಕುಮಾರ್ ಕೊಳ್ಳೇಗಾಲದಲ್ಲಿ ಭೂಮಿಪೂಜೆ ನೆರವೇರಿಸಲಿದ್ದು, ಇಲ್ಲಿನ ಜನರ ಹಲವು ವರ್ಷಗಳ ಕನಸು ನನಸಾಗಲಿದೆ.

ಗೋಪಿನಾಥಂ ಹಾಗೂ ದೂರದ ಇತರ ಗ್ರಾಮದ ಜನರು ಕೆಲಸ ಕಾರ್ಯಕ್ಕಾಗಿ ಕೊಳ್ಳೇಗಾಲದ ಕಚೇರಿಗಳಿಗೆ ಅಲೆಯಬೇಕಿತ್ತು. 2018ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನೂರನ್ನು ಹೊಸ ತಾಲೂಕಾಗಿ ರಚನೆ ಮಾಡಿದ್ದರು. ಆದರೆ 8 ವರ್ಷ ಕಳೆಯುತ್ತಾ ಬಂದರೂ ತಾಲೂಕಿಗೆ ಅಗತ್ಯವಾದ ವಿವಿಧ ಇಲಾಖೆಯ ಕಚೇರಿಗಳು ಆರಂಭವಾಗಿರಲಿಲ್ಲ. ತಾಲೂಕು ಕೇಂದ್ರದಲ್ಲಿ ವಿವಿಧ ಕಚೇರಿಗಳು ಸ್ಥಾಪನೆಯಾಗಬೇಕು ಎಂಬುದಾಗಿ ಜನರು ಹಲವು ವರ್ಷದಿಂದಲೂ ಒತ್ತಾಯಿಸುತ್ತಿದ್ದರು. ಸಿದ್ದರಾಮಯ್ಯ ಅವರು ಕಳೆದ ಬಜೆಟ್‌ನಲ್ಲಿ ತಾಲೂಕು ಆಡಳಿತಕ್ಕಾಗಿ ಪ್ರಜಾಸೌಧವನ್ನು ಘೋಷಿಸಿ 2025ರ ಏ.24 ರಂದು ಮ.ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದರು.

ಪಟ್ಟಣ ಸಮೀಪದ ಹುಲ್ಲೇಪುರ ಸರ್ವೇ ನಂಬರ್ 312 ರಲ್ಲಿ ಒಂದೂವರೆ ಎಕರೆಯಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. 2025ರ ಏ.25 ರಂದು ಅಂದಿನ ಸಿಎಂ ಸಿದ್ದರಾಮಯ್ಯ ಅವರು ಕಟ್ಟಡ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಟೆಂಡರ್ ಆಗದಿರುವುದನ್ನು ತಿಳಿದು ಹಿಂದಿರುಗಿದರು. ಈಗ 6.71 ಕೋಟಿ ರೂ.ವೆಚ್ಚದಲ್ಲಿ ಈ ಕಾರ್ಯ ಸೆ.30 ರಂದು ಸಿಎಂ ಡಿ.ಕೆ ಶಿವಕುಮಾರ್ ಅವರಿಂದ ನೆರವೇರಲಿದೆ.

ಬ್ರಿಟಿಷ್ ಕಾಲದ ಕಟ್ಟಡಕ್ಕೆ ಮುಕ್ತಿ: ಪಟ್ಟಣ ಪೊಲೀಸ್ ಠಾಣೆ ಸಮೀಪದಲ್ಲಿ ಶತಮಾನ ಪೂರೈಸಿರುವ ಉಪ ಹಾಗೂ ವಿವಾಹ ನೋಂದಣಿ ಕಚೇರಿ 1905ರಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಸ್ಥಾಪನೆಯಾಗಿತ್ತು. ಅಲ್ಲದೆ ಕಟ್ಟಡ ಶಿಥಿಲಾವಸ್ಥೆ ತಲುಪಿತ್ತು. ಇತ್ತ ತಾಲೂಕು ರಚನೆಯಾಗಿ 8 ವರ್ಷಗಳು ಕಳೆದರೂ ಸಬ್ ರಿಜಿಸ್ಟಾರ್ ಕಚೇರಿಗೆ ಸ್ವಂತ ಕಟ್ಟಡದ ಭಾಗ್ಯ ಕೂಡಿ ಬಂದಿರಲಿಲ್ಲ. ಈಗ ಭೂಮಿಪೂಜೆ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net