ಜನರಿಂದ ಸ್ವೀಕರಿಸಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪಾ ಕಟ್ಟುನಿಟ್ಟಿನ ಸೂಚನೆ
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆಯ ಅಹವಾಲು ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಶ್ರೀರೂಪಾ, ಸ್ನೇಹರಾಜ್, ಸುಬ್ರಮಣ್ಯ, ಹೊನ್ನರಾಜು, ವೆಂಕಟೇಶ್, ಪರಶುರಾಮ್ ಛಲವಾದಿ ಇತರರು ಇದ್ದರು.
Published on: 

ಚಾಮರಾಜನಗರ : ಜಿಲ್ಲಾದ್ಯಂತ ತಾಲೂಕು ಹಾಗೂ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನಾ ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನದ ಅಹವಾಲು ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರಿಂದ ಸ್ವೀಕರಿಸಿರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಅಗತ್ಯವಿದೆ. ಸ್ವೀಕೃತವಾಗಿರುವ ಅರ್ಜಿಗಳನ್ನು ಈಗಾಗಲೇ ಪ್ರಜಾಸೇವಾ ಆಂದೋಲನ ಪೋರ್ಟಲ್‌ನಲ್ಲಿ ನೋಂದಣಿ ಮಾಡಲಾಗಿದ್ದು, ಸಾಕಷ್ಟು ಇಲಾಖೆಗಳಿಗೆ ಸಂಬಂಧಪಟ್ಟ ಅರ್ಜಿಗಳು ಬಾಕಿ ಇವೆ. ಅವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳಿಗೆ ಸಂಬಂಧಪಟ್ಟ ಇಲಾಖೆಗಳು ಎಷ್ಟು ಸಾಧ್ಯವೋ ಅಷ್ಟೂ ಅರ್ಜಿಗಳನ್ನು ತಮ್ಮ ಹಂತದಲ್ಲಿಯೇ ವಿಲೇವಾರಿ ಮಾಡಲು ಮುಂದಾಗಬೇಕು. ಅಗತ್ಯವಿದ್ದರೆ ಸೂಕ್ತ ಕಾರಣಗಳನ್ನು ನೀಡಿ ಮುಂದಿನ ಹಂತಕ್ಕೆ ಕಳುಹಿಸಬೇಕು. ಸಕಾರಣವಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಯಾಮಾನುಸಾರ ಪರಿಶೀಲಿಸಲಾಗುವುದೆಂದು ಹಿಂಬರಹ ನೀಡಿ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು. ಪ್ರಜಾಸೇವಾ ಆಂದೋಲನ ಕುರಿತು ಸಾರ್ವಜನಿಕರಲ್ಲಿ ನಿರಾಸಕ್ತಿ ಮೂಡದಂತೆ ತಡೆಯಲು ಅರ್ಜಿಗಳ ಇತ್ಯರ್ಥದ ವಿಳಂಬವನ್ನು ತಡೆಯಬೇಕು ಎಂದು ಹೇಳಿದರು.

ಒಂದು ಅಥವಾ ಎರಡು ಅರ್ಜಿಗಳು ಬಾಕಿ ಇರುವ ಕೆಲ ಇಲಾಖೆಗಳು ಇಂದು ಸಂಜೆಯೊಳಗೆ ವಿಲೇವಾರಿ ಮಾಡಬೇಕು. ಹೆಚ್ಚಿನ ಅರ್ಜಿಗಳು ಬಾಕಿ ಇರುವ ಇಲಾಖೆಗಳು ಮುಂದಿನ 2-3 ದಿನಗಳಲ್ಲಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಅರ್ಜಿಗಳನ್ನು ಶೀಘ್ರವಾಗಿ ಪರಿಹರಿಸಿ ಅರ್ಜಿಗಳಲ್ಲಿರುವ ಸಾರ್ವಜನಿಕರ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅರ್ಜಿ ವಿಲೇವಾರಿಯಾಗಿರುವ ಬಗ್ಗೆ ಮಾಹಿತಿ ನೀಡಬೇಕು. ಅರ್ಜಿಗಳ ತ್ವರಿತ ಪರಿಹಾರಕ್ಕಾಗಿ ನೀಡುವ ಹಿಂಬರಹ ಕ್ರಮಬದ್ಧವಾಗಿರಬೇಕು ಎಂದು ತಿಳಿಸಿದರು.

ಡಿವೈಎಸ್‌ಪಿ ಸ್ನೇಹರಾಜ್, ಪ್ರಭಾರ ಅಪರ ಜಿಲ್ಲಾಧಿಕಾರಿ ಸುಬ್ರಮಣ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೆಂಕಟೇಶ್, ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ಕೊಳ್ಳೇಗಾಲ ನಗರಸಭೆ ಪೌರಾಯುಕ್ತ ನಟರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‌ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪಾಟೀಲ್ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು, ಆಹಾರ ಇಲಾಖೆ ಉಪನಿರ್ದೇಶಕಿ ವಸುಂಧರಾ ಹೆಗಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net