

ಮೂರು ತಿಂಗಳ ಹಿಂದೆ ಕೊಡಗು ಜಿಲ್ಲೆಯ ದುಬಾರೆಯ ಸಾಕಾನೆ ಶಿಬಿರದ ಸುಮಾರು 26 ವರ್ಷದ ಶಾಂತರೂಪಿ ಕಂಜನ್ ಉಗ್ರಸ್ವರೂಪ ತಾಳಿದ್ದ. ಪರಿಣಾಮ ಸಹಜೀವಿ ಸಾಕಾನೆ ಮಾರ್ತಾಂಡ ಬಲಿಯಾದ. ಈ ಕಾದಾಟದಲ್ಲಿ ತಮಿಳುನಾಡಿನ 33 ವರ್ಷದ ಪ್ರವಾಸಿ ಮಹಿಳೆ ಕೂಡ ಸಾವನ್ನಪ್ಪಿದರು.
ಈ ದುರ್ಘಟನೆಯ ಬಳಿಕ ದುಬಾರೆಗೆ ಪ್ರವಾಸಿಗರ ಪ್ರವೇಶಕ್ಕೆ ತಡೆಬಿತ್ತು. ಸೆ.20ರಿಂದ ಸಾರ್ವಜನಿಕರ ವೀಕ್ಷಣೆಗೆ ಮತ್ತೆ ಅವಕಾಶ ದೊರೆತಿದೆ. ಆದರೆ ಈ ಅವಘಡಕ್ಕೆ ಕಾರಣನಾದ ಕಂಜನ್‌ಗೆ ಕೆ.ಗುಡಿಯ ಏಕಾಂಗಿ ಗಜೇಂದ್ರನ ರೀತಿ ಒಂಟಿತನದ ಶಿಕ್ಷೆ, ಅರಣ್ಯ ಸಿಬ್ಬಂದಿಯ ಕಣ್ಣಳತೆಯ ಬೇಲಿಯಲ್ಲಿ ಬಂಧಿಯಾಗಬೇಕಾದ ಪರಿಸ್ಥಿತಿ ಬರಬಹುದು ಎಂದು ಅಂದಾಜಿಸಲಾಗಿತ್ತು. ಬದಲಾಗಿ ಈ ಅವಘಡದಿಂದ ಕಂಜನ್ ಕಟ್ಟಿಕೊಂಡ ಹಣೆಪಟ್ಟಿಯನ್ನು ಕಳಚಿ ಹಾಕಲು ನರಬೇಟೆಯಾಡಿದ್ದ ಹುಲಿ ಸೆರೆಗೆ ಅವಕಾಶ ಸಿಕ್ಕಿದೆ.
ಚಾಮರಾಜನಗರ ತಾಲೂಕಿನ ಬಡಗಲಪುರದಲ್ಲಿ ಗೌರಿ-ಗಣೇಶ ಹಬ್ಬದ ದಿನ ರೈತ ಬಸವಣ್ಣ(65) ಹುಲಿ ದಾಳಿಗೆ ಬಲಿಯಾದರು. ವೃದ್ಧನ ಮೈಯ ಮಾಂಸವನ್ನು ಹುಲಿ ಕಿತ್ತು ತಿಂದಿದ್ದ ಪರಿ ರಣಭೀಕರವಾಗಿತ್ತು. ವ್ಯಾಘ್ರವೆಂದರೆ ಮೊದಲೇ ಜನರಿಗೆ ಭಯ. ಈ ರೀತಿ ಕ್ರೂರವಾಗಿ ದಾಳಿ ಮಾಡಿರುವ ಹುಲಿ ಊರಿಗೆ ಬಂದಿದೆ ಎಂದರೆ ಎದೆಯೊಳಗಿನ ದಿಗಿಲು ಮುಗಿಲು ಮುಟ್ಟುತ್ತದೆ. ಆನೆಗಳನ್ನು ಕರೆಸಿಯೇ ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯ ಮಾಡಿದ್ದು, ಸಾಕಾನೆಗಳೆಲ್ಲಾ ದಸರಾದಲ್ಲಿ ಪಾಲ್ಗೊಂಡಿರುವುದರಿಂದ ಕಂಜನ್‌ಗೆ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ. ಹೀಗಾಗಿ ದುಬಾರೆಯ ಕುಮ್ಕಿ ಆನೆ ಈಶ್ವರ್ ಜತೆಗೆ ಕಂಜನ್ ಕೂಡ ಬಂದಿದ್ದಾನೆ. ಕೂಂಬಿಂಗ್‌ಗೂ ಮೊದಲು ಎಣ್ಣೆ ಹೊಳೆ ಮಹದೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಈ ವೇಳೆ ಈಶ್ವರ್ ಮತ್ತು ಕಂಜನ್ ಉಪಸ್ಥಿತರಿದ್ದರು. ನಂತರ ಕಾರ್ಯಾಚರಣೆ ಶುರುವಾಗಿದೆ.
ಶಿಬಿರಗಳಲ್ಲಿ ಆನೆಗಳ ಕಾದಾಟ ಸಹಜ. ಮದವೇರಿದ ಗಜಗಳು ಪುಂಡಾಟ ನಡೆಸುತ್ತವೆ. ಮನುಷ್ಯರ ವರ್ತನೆಗಳೇ ವ್ಯತಿರಿಕ್ತವಾಗಿವೆ. ಹೀಗಿದ್ದ ಮೇಲೆ ಆನೆಗಳೇನೂ ಇದಕ್ಕೆ ಹೊರತಲ್ಲ. ಆದರೆ ಹಿನ್ನೆಲೆಯ ಆಧಾರದ ಮೇಲೆ ಕಟ್ಟಿಕೊಂಡಿರುವ ಹಣೆಪಟ್ಟಿಯನ್ನು ಕಿತ್ತೆಸೆಯಲು ಕಂಜನ್ ಪಾಲಿಗೆ ಈ ಕಾರ್ಯಾಚರಣೆ ಮಹತ್ವದ್ದಾಗಿದೆ. ತನ್ನ ಶಾಂತ ಸ್ವಭಾವವನ್ನು ಮನದಟ್ಟು ಮಾಡುವ ಉನ್ನತ ವೇದಿಕೆಯೂ ಆಗಿದೆ.
ಪರಿವರ್ತನೆಯ ಪಯಣದಲ್ಲಿ...: ಪುಂಡಾಟದಿಂದ ಪರಿವರ್ತನೆಯ ಕಡೆಗೆ ಪಯಣ ಬೆಳೆಸಿದ ಕಂಜನ್ ಮತ್ತೆ ಅದೇ ಹಾದಿಯಲ್ಲಿ ಸಾಗುತ್ತಿದ್ದಾನೆ. 2014ರಲ್ಲಿ ಹಾಸನದ ಆಲೂರಿನಲ್ಲಿ ನಡೆದ ಆನೆ ಸೆರೆ ಕಾರ್ಯಾಚರಣೆಯಲ್ಲಿ ಒಂದು ಕಾಡಾನೆಯನ್ನು ಸೆರೆ ಹಿಡಿದು ದುಬಾರೆಯ ಶಿಬಿರನ್ನು ಕರೆತಂದು ಪಳಗಿಸಲಾಯಿತು. ಆ ಆನೆಯೇ ಎಲ್ಲರ ಅಚ್ಚುಮೆಚ್ಚಿನ ಕಂಜನ್ ಆಯಿತು. ಈ ಹಿಂದಿನ ಎರಡು ವರ್ಷಗಳ ನಾಡಹಬ್ಬ ದಸರಾದಲ್ಲಿ ಪಾಲ್ಗೊಂಡು ಕೀರ್ತಿ ಮೆರೆದಿತ್ತು. ದುಬಾರೆಯ ದುರ್ಘಟನೆಯ ಬಳಿಕ ಕಂಜನ್‌ಗೆ ದಸರಾದಲ್ಲಿ ಭಾಗವಹಿಸುವ ಅವಕಾಶ ಕೈ ತಪ್ಪಿತು. ಆದರೆ ಕಂಜನ್ ಕೂಂಬಿಂಗ್ ಸ್ಪೆಷಲಿಸ್ಟ್ ಆಗಿದ್ದು, ಈ ಹಿಂದೆ ಕೊಡಗು, ಮಂಗಳೂರಿನಲ್ಲಿ ನಡೆದಿರುವ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ. ಇದರ ಆಧಾರದ ಮೇಲೆ ಬಡಗಲಪುರದಲ್ಲಿ ಹುಲಿ ಸೆರೆ ಹಿಡಿಯಲು ಬಂದಿದೆ.
ನೆನಪಿನಂಗಳದಲ್ಲಿ ಏಕಾಂಗಿ ಗಜೇಂದ್ರ: ಸಾಕಾನೆಗಳು ಮದ ಬಂದು ಅಥವಾ ಪುಂಡಾಟ ನಡೆಸಿದಾಗ ಆಗುವ ಅನಾಹುತಗಳ ಬಳಿಕ ಅವುಗಳ ಕುರಿತು ಬದಲಾಗುವ ಭಾವನೆಯ ವಿಚಾರದಲ್ಲಿ ಏಕಾಂಗಿ ಗಜೇಂದ್ರ ನೆನಪಾಗುತ್ತಾನೆ. 1987ರಲ್ಲಿ ಕಡಗಿನ ಕಟ್ಟೆಪುರ ಅರಣ್ಯದಲ್ಲಿ ಗಜೇಂದ್ರನನ್ನು ಸೆರೆ ಹಿಡಿಯಲಾಗಿತ್ತು. ಬಳಿಕ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೆ.ಗುಡಿ ಸಾಕಾನೆ ಶಿಬಿರಕ್ಕೆ ಕರೆತರಲಾಯಿತು. ಸೌಮ್ಯಜೀವಿ ಗಜೇಂದ್ರ ಮೈಸೂರು ದಸರಾದಲ್ಲಿ ಹಲವು ಬಾರಿ ಪಾಲ್ಗೊಳ್ಳುತ್ತಿದ್ದ. ಇಷ್ಟು ದಿನಗಳಲ್ಲಿ ನಾಡಹಬ್ಬದ ಮುಂಚೂಣಿಯ ಹೊಣೆ ಹೊರುತ್ತಿತ್ತು. ಆದರೆ, 2015ರ ಜೂ.16ರಂದು ಮದವೇರಿ ತನ್ನೊಂದಿಗೆ ಶಿಬಿರದಲ್ಲಿ ಇದ್ದ ಸಾಕಾನೆ ಶ್ರೀರಾಮನನ್ನು ತಿವಿದು ಕೊಂದಿತು. ಮಾವುತ ಗಣಪತಿ(50) ಗಜೇಂದ್ರನ ತುಳಿತಕ್ಕೆ ಒಳಗಾಗಿ ಮೃತಪಟ್ಟ. ಈ ಘಟನೆಯ ಬಳಿಕ ಗಜೇಂದ್ರನನ್ನು ಸೆರೆ ಹಿಡಿಯಲಾಯಿತು. ಆಗಿನಿಂದ ಹಲವು ವರ್ಷಗಳ ಕಾಲ ಗಜೇಂದ್ರ ಶಿಬಿರದಲ್ಲಿ ಏಕಾಂಗಿಯಾಗಿಬಿಟ್ಟ. 75 ವರ್ಷದ ವೃದ್ಧ ಗಜೇಂದ್ರ ಪರಿಸರವಾದಿಗಳ ಹೋರಾಟದ ಲವಾಗಿ, ಹಿಂದಿನ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶದ ಮೇರೆಗೆ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಸೇರಿತು. ಏಕಾಂಗಿ ವನವಾಸ ಅಂತ್ಯಗೊಂಡಿತು. ಈ ರೀತಿಯಲ್ಲಿ ಕಂಜನ್ ಆಗದೆ ಇರಲಿ, ಎಲ್ಲ ಸಾಕಾನೆಗಳಂತೆ ಬದುಕಲಿ ಎನ್ನುವುದು ಪರಿಸರವಾದಿಗಳ ಕಳಕಳಿಯಾಗಿದೆ.
ಕಾರ್ಯಾಚರಣೆಗೆ ಚಾಲನೆ ನೀಡಿದಾಗ ಈಶ್ವರ್ ಮತ್ತು ಕಂಜನ್ ಆನೆಗಳನ್ನು ನೋಡಿದೆ. ಎರಡೂ ಸಾಕಾನೆಗಳು ಶಾಂತ ಸ್ವಭಾವದಂತೆ ಕಂಡವು. ದುಬಾರೆಯಲ್ಲೇನೋ ಅವಘಡವಾಯಿತು. ಇಲ್ಲಿನ ಹುಲಿ ಸೆರೆ ಹಿಡಿಯಲು ಕಂಜನ್ ಬಂದಿರುವುದು ಜನರ ಜೀವ ಉಳಿಸುವ ಮಹತ್ವದ ಕಾರ್ಯವಾಗಿದೆ. ಅರಣ್ಯ ಇಲಾಖೆ ಜನರು ಪೋಟೋ ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಆನೆಗಳು ಸೀಮಿತಗೊಳಿಸಬಾರದು. ಇವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹುಲಿ ಸೆರೆ ಹಿಡಿದು ಜನರ ಜೀವ ರಕ್ಷಣೆ ಮಾಡಬೇಕು.
ಅರ್ಜುನ್, ಯುವ ಮುಖಂಡ, ಬಡಗಲಪುರ, ಚಾಮರಾಜನಗರ