ಯಳಂದೂರು: ಚಾಮರಾಜನಗರ ತಾಲೂಕಿನ ಕಮರವಾಡಿ ಗ್ರಾಮದ ಉಪ್ಪಾರ ಬಡಾವಣೆ ಹಲವು ವರ್ಷಗಳಿಂದ ಮೂಲ ಸೌಕರ್ಯದಿಂದ ವಂಚಿತವಾಗಿದೆ.
ಕೊಳ್ಳೇಗಾಲ ಕ್ಷೇತ್ರದ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಹೋಬಳಿ ದೇಮಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮರವಾಡಿ ಗ್ರಾಮದ ಹೊಸ ಉಪ್ಪಾರ ಬಡಾವಣೆಯಲ್ಲಿ ರಸ್ತೆ, ಚರಂಡಿ ಇಲ್ಲವಾಗಿವೆ. ಕೆಟ್ಟು ನಿಂತಿರುವ ಕುಡಿಯುವ ನೀರಿನ ಕೈ ಬೋರ್ ದುರಸ್ತಿಪಡಿಸಿಲ್ಲ. ಇನ್ನು ಜಲಜೀವನ ಮಿಷನ್ ಯೋಜನೆಯಡಿ ಪೂರೈಸುವ ನೀರು 1 ಗಂಟೆಗೆ ಸಿಮೀತವಾಗಿದೆ. ಇದರಿಂದ ಬಡಾವಣೆ ಜನರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ, ಚರಂಡಿ ಇಲ್ಲ: 35ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿರುವುದರಿಂದ 100 ಕ್ಕೂ ಹೆಚ್ಚು ಜನರು ವಾಸಿಸುವ ಈ ಬಡಾವಣೆಯಲ್ಲಿ ಇಲ್ಲಿಯವರೆಗೆ ರಸ್ತೆ, ಚರಂಡಿ ನಿರ್ಮಾಣವಾಗಿಲ್ಲ. ಮಳೆಗಾಲದಲ್ಲಿ ಇಡೀ ಬಡಾವಣೆ ಕೆಸರುಗದ್ದೆಯಂತಾಗುತ್ತದೆ. ಮಕ್ಕಳು, ವೃದ್ಧರು ಓಡಾಡಲು ಪರದಾಡಬೇಕಾಗಿದೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಯ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿತ್ತು, ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಇದರಿಂದ ಜನರಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಲಿದೆ.
ಒಂದು ಗಂಟೆಗೆ ಸೀಮಿತ ಕುಡಿವ ನೀರು
ಜಲ ಜೀವನ ಮಿಷನ್ ಮೂಲಕ ನೀರು ಪೂರೈಕೆ ಆಗುತ್ತಿದ್ದರೂ, ಅದು ಕೇವಲ ಒಂದು ಗಂಟೆಗೆ ಸೀಮಿತವಾಗಿದೆ. ಒಂದು ಗಂಟೆಯಲ್ಲಿ ಇಡೀ ಬಡಾವಣೆಗೆ ನೀರು ಸಿಗುವುದಿಲ್ಲ. ನೀರು ಬಂದಾಗ ಹಿಡಿದುಕೊಂಡರೆ ಮಾತ್ರ, ಇಲ್ಲವಾದರೆ ಇಡೀ ದಿನ ನೀರಿಲ್ಲದೆ ಕಳೆಯಬೇಕು. ಇದ್ದ ಒಂದು ಕೈಪಂಪ್ ಕೆಟ್ಟು ನಿಂತಿದೆ. ಅದನ್ನು ಸರಿಪಡಿಸಲು ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಜನರು ದೂರದಿಂದ ನೀರು ತರುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಆಡಳಿತ ನಿರ್ಲಕ್ಷ್ಯವೇ ಪ್ರಮುಖವಾಗಿದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾರೂ ಗಮನ ಹರಿಸಿಲ್ಲ. ಅಧಿಕಾರಿಗಳು ಕೇವಲ ಭರವಸೆ ನೀಡಿ ಕಾಲಹರಣ ಮಾಡುತ್ತಿದ್ದಾರೆ ಎಂದು ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆಗಳಲ್ಲಿ ಮತ ಹಾಕುವಾಗ ನಾವು ನೆನಪಾಗುತ್ತೇವೆ. ಚುನಾವಣೆ ಮುಗಿದ ಮೇಲೆ ಯಾರೂ ನಮ್ಮ ಬಡಾವಣೆಯ ಕಡೆ ತಿರುಗಿ ನೋಡುವುದಿಲ್ಲ. 15 ವರ್ಷದಿಂದ ಇದೇ ಪರಿಸ್ಥಿತಿ ಇದೆ. ಕೂಡಲೇ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ, ಚರಂಡಿ ನಿರ್ಮಾಣ ಹಾಗೂ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಬೇಕು.
ಜವರೇಶ್ ಉಪ್ಪಾರ ಬಡಾವಣೆ ನಿವಾಸಿ, ಕಮರವಾಡಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮ ಠಾಣೆಗೆ ಈ ಸರ್ವೇ ನಂಬರ್‌ನಲ್ಲಿ ಇರುವುದರಿಂದ ರಸ್ತೆ, ಚರಂಡಿ ನಿರ್ಮಾಣ ಮಾಡಲು ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಬಡಾವಣೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗಮನ ನೀಡಲಾಗುವುದು.
ವೆಂಕಟಾಚಲಮೂರ್ತಿ ಪಿಡಿಒ, ದೇಮಹಳ್ಳಿ ಗ್ರಾ.ಪಂ.