ಬಾಲ್ಯ ವಿವಾಹ ನಿರ್ಮೂಲನೆಗೆ ಸಹಕಾರ ಅಗತ್ಯ

ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕಾನೂನು ಅರಿವು-ನೆರವು ಮತ್ತು ಆರೋಗ್ಯ ನೈರ್ಮಲ್ಯ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಉದ್ಘಾಟಿಸಿದರು. ಸಿವಿಲ್ ನ್ಯಾಯಾಧೀಶರಾದ ಎಚ್.ಸುಜಾತಾ ಮತ್ತಿತರರಿದ್ದರು.
ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕಾನೂನು ಅರಿವು-ನೆರವು ಮತ್ತು ಆರೋಗ್ಯ ನೈರ್ಮಲ್ಯ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಉದ್ಘಾಟಿಸಿದರು. ಸಿವಿಲ್ ನ್ಯಾಯಾಧೀಶರಾದ ಎಚ್.ಸುಜಾತಾ ಮತ್ತಿತರರಿದ್ದರು.
Published on
ಯಳಂದೂರು: ಜಿಲ್ಲೆಯಲ್ಲಿ ಜೀವಂತವಾಗಿರುವ ಬಾಲ್ಯ ವಿವಾಹ ಪದ್ಧತಿಯನ್ನು ಮುಕ್ತಗೊಳಿಸಲು ಪಾಲಕರು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಕೋರಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ವಕೀಲರ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಮತ್ತು ಆರೋಗ್ಯ-ನೈರ್ಮಲ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತವಾಗಿದೆ. ಇದು ನಿಲ್ಲಬೇಕಾದರೆ ಸಾರ್ವಜನಿಕರಲ್ಲಿ ಅರಿವು ಮೂಡಬೇಕು. ಬಾಲ್ಯ ವಿವಾಹ ಕಾನೂನಿನ ಉಲ್ಲಂಘನೆಯಾಗಿದ್ದು, ಇದಕ್ಕೆ ಕಠಿಣ ಶಿಕ್ಷೆ ಇದೆ ಎಂಬುದರ ಅರಿವಾಗಬೇಕು. ಇದಕ್ಕೆ ಇಂತಹ ಕಾರ್ಯಾಗಾರಗಳು ನೆರವಾಗುತ್ತವೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಈ ಬಗ್ಗೆ ಮನೆ-ಮನೆಗೂ ತೆರಳಿ ಪ್ರಚಾರ ಮಾಡಬೇಕು ಎಂದು ಸೂಚನೆ ನೀಡಿದರು.
ಕಾನೂನು ನಮ್ಮ ನೆರಳಿದ್ದಂತೆ, ಇದು ಸದಾಕಾಲ ನಮ್ಮೊಂದಿಗೆ ಇರುತ್ತದೆ. ಆದರೆ ಇದನ್ನು ಉಲ್ಲಂಘಿಸಬಾರದು. ಜಿಲ್ಲೆಯ ಜೈಲಿನಲ್ಲಿ ಪೋಕ್ಸೋ ಕಾಯ್ದೆ ಅಪರಾಧಿಗಳ ಸಂಖ್ಯೆಯೇ ಅಧಿಕವಾಗಿದ್ದು, ಈ ಬಗ್ಗೆ ಜಾಗೃತಿ ಮೂಡಬೇಕು. ಪಾಲಕರು ಅದರಲ್ಲೂ ಹೆಣ್ಣು ಮಕ್ಕಳಿರುವ ಪಾಲಕರು ಈ ಬಗ್ಗೆ ತಮ್ಮ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಮಕ್ಕಳನ್ನು ಶಾಲೆಗೆ ಸೇರಿಸಿದ ಮೇಲೆ ಇವರ ಮೇಲೆ ಗಮನ ಇಡಬೇಕು. ನಾಗರಿಕ ರಕ್ಷಣಾ ಕಾಯ್ದೆಯಡಿಯಲ್ಲಿ ಪರಿಶಿಷ್ಟ ಜಾತಿ, ವರ್ಗದವರಿಗೆ ದೌರ್ಜನ್ಯ ಎಸಗಿದರೆ ಇದಕ್ಕೆ ನಿರೀಕ್ಷಣಾ ಜಾಮೀನು ಇಲ್ಲ. ಮನುಷ್ಯ, ಮನುಷ್ಯನನ್ನು ಜಾತಿ, ಜನಾಂಗೀಯ ಹೆಸರಿನಲ್ಲಿ ವಿರೋಧಿಸುವ ಕೆಟ್ಟ ಚಾಳಿ ನಿಲ್ಲಬೇಕು ಎಂದು ಹೇಳಿದರು.
ಯಳಂದೂರು ಸಿವಿಲ್ ನ್ಯಾಯಾಧೀಶೆ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಎಚ್.ಸುಜಾತಾ ಮಾತನಾಡಿ, ಯಳಂದೂರು ನ್ಯಾಯಾಲಯದ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣಗಳೇ ಹೆಚ್ಚಾಗಿವೆ. ಅದರಲ್ಲೂ ಹೆಚ್ಚಾಗಿ ಸ್ವ ಕುಟುಂಬದವರೇ ಇದರಲ್ಲಿ ಹೆಚ್ಚು ಭಾಗಿಯಾಗುತ್ತಿರುವುದು ವಿಷಾದನೀಯವಾಗಿದೆ. ನಮ್ಮ ದೇಶದಲ್ಲಿ ಬಾಲ್ಯ ವಿವಾಹ ಪದ್ಧತಿ ಶೇ.26ರಷ್ಟಿದ್ದರೆ ಯಳಂದೂರು ನ್ಯಾಯಾಲಯದ ವ್ಯಾಪ್ತಿಯಲ್ಲಿ ಶೇ.29ರಷ್ಟು ಪ್ರಕರಣಗಳು ಇರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಇದು ನಿಲ್ಲಬೇಕಾದರೆ ಕಾನೂನು ಅರಿವು ಮೂಡಿಸಬೇಕು. ಹೆಣ್ಣು ಮಕ್ಕಳು ಧೈರ್ಯದಿಂದ ಇದನ್ನು ವಿರೋಧಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಕುಟುಂಬದವರು ಇದಕ್ಕೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ರಾಜಣ್ಣ, ಸಿಪಿಐ ಸುಬ್ರಹ್ಮಣ್ಯ, ಬಿಇಒ ಮಾರಯ್ಯ, ನಿಸರ್ಗ ಟ್ರಸ್ಟ್‌ನ ನಾಗರಾಜು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಕ್ಷಯ ಮುಕ್ತ ಅಭಿಯಾನ: 2030ಕ್ಕೆ ಭಾರತವನ್ನು ಕ್ಷಯಮುಕ್ತ ಮಾಡುವ ನಿಟ್ಟಿನಲ್ಲಿ ಕ್ಷಯಮುಕ್ತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮೀರ್ ಅರ್ಷದ್ ಅಲಿ ತಿಳಿಸಿದರು.
ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳನ್ನು ೋಷಿಸಲಾಗುತ್ತಿದೆ. ಗ್ರಾಪಂ ವ್ಯಾಪ್ತಿಗಳಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ವೈದ್ಯರೊಂದಿಗೆ ಆಶಾ ಕಾರ್ಯಕರ್ತೆಯರೂ ಕೈಜೋಡಿಸಬೇಕು. ಕ್ಷಯ ನಿರ್ಮೂಲನೆ ಮಾಡಲು ಸಾಮೂಹಿಕ ಹೊಣೆಗಾರಿಕೆ ಮುಖ್ಯವಾಗಿದೆ. ಇದರೊಂದಿಗೆ ಎಚ್‌ಐವಿಯ ಬಗ್ಗೆ ಅರಿವು ಮೂಡಿಸಬೇಕು. ಸ್ನೇಹಾ ಕ್ಲಿನಿಕ್ ಹಾಗೂ ಎಆರ್‌ಟಿ ಕೇಂದ್ರದ ನೆರವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಕೀಲ ವೆಂಕಟಾಚಲ ಮಾತನಾಡಿ, ರಸ್ತೆ ಸಂಚಾರ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಸರ್ಕಾರ ಉಚಿತ ಕಾನೂನು ಸಲಹೆಯನ್ನು ನೀಡಲು ಅವಕಾಶ ಕಲ್ಪಿಸಿದ್ದು, ಕಾನೂನು ಸೇವಾ ಸಮಿತಿಯ ನೆರವನ್ನು ಪಡೆದುಕೊಳ್ಳಬೇಕು. ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ಬೇಗ ಪರಿಹರಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯ ಬಗ್ಗೆ ತಿಳಿದುಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾಯ್ದೆ ಕುರಿತು ಜನರಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಜಾಗತಿ ಮೂಡಿಸಲಾಗುತ್ತಿದೆ. ಇದರಿಂದ ಸವಾಜದಲ್ಲಿ ನಡೆಯುವ ದೌರ್ಜನ್ಯ, ಅಸಮಾನತೆ, ಬಹಿಷ್ಕಾರ ಪ್ರಕರಣಗಳನ್ನು ಬುಡ ಸಮೇತ ಕಿತ್ತು ಹಾಕಬಹುದು, ಇದರಿಂದ ಸಂವಿಧಾನದ ಮೂಲ ಹಕ್ಕುಗಳ ಪಾಲನೆಯಾಗಲಿದೆ.
ಕೇಶವಮೂರ್ತಿ, ಸವಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ, ಯಳಂದೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net