ಬಿಳಿಗಿರಿರಂಗನಬೆಟ್ಟದಲ್ಲಿ ತೆಪ್ಪೋತ್ಸವ ಸಂಭ್ರಮ

ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಸೋಮೇಶ್ವರ ಕೆರೆಯಲ್ಲಿ ಶ್ರೀಬಿಳಿಗಿರಿರಂಗನಾಥಸ್ವಾಮಿಯ ತೆಪ್ಪೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು.
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಸೋಮೇಶ್ವರ ಕೆರೆಯಲ್ಲಿ ಶ್ರೀಬಿಳಿಗಿರಿರಂಗನಾಥಸ್ವಾಮಿಯ ತೆಪ್ಪೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು.
Published on
ಯಳಂದೂರು: ತಾಲೂಕಿನ ಯಾತ್ರಾ ಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಒಂದು ವಾರ ನಡೆಯುವ ಬಿಳಿಗಿರಿ ರಂಗನಾಥಸ್ವಾಮಿ ತೆಪ್ಪೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.
ದೇಗುಲದಿಂದ ಐದಾರು ಕಿಲೋಮೀಟರ್ ದೂರದಲ್ಲಿರುವ ಸೋಮೇಶ್ವರನ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲಾಯಿತು.
ಬಿದಿರನ್ನು ಬಳಸಿ ತೆಪ್ಪವನ್ನು ನಿರ್ಮಿಸಲಾಗುತ್ತದೆ. ಇದರ ಜವಾಬ್ದಾರಿಯನ್ನು ಇಲ್ಲಿನ ಸೋಲಿಗ ಸಮುದಾಯವೇ ನೆರವೇರಿಸುವುದು ಹಿಂದಿನಿಂದ ನಡೆದುಬಂದ ಸಂಪ್ರದಾಯವಾಗಿದೆ. ದೇವರ ಉತ್ಸವಮೂರ್ತಿಯನ್ನು ದೇಗುಲದಿಂದ ಶ್ರದ್ಧಾಭಕ್ತಿಯಿಂದ ಹೊತ್ತು ತರಲಾಯಿತು. ಈ ವೇಳೆ ಹರಕೆ ಹೊತ್ತ ಭಕ್ತರು ಅಲ್ಲಲ್ಲಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.
ಬಿಳಿಗಿರಿರಂಗನಬೆಟ್ಟದಲ್ಲಿ ನಡೆಯುವ ದೊಡ್ಡ ಜಾತ್ರೆಯಾದ ಒಂದು ತಿಂಗಳ ನಂತರ ತೆಪ್ಪೋತ್ಸವ ಜರುಗುತ್ತದೆ. ಒಟ್ಟು 6 ದಿನಗಳ ಕಾಲ ಪ್ರತಿದಿನ ಸಂಜೆ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ಹೊತ್ತು ತಂದು ಅಲಂಕೃತ ತೆಪ್ಪದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿ, ಕೆರೆಯಲ್ಲಿ ತೆಪ್ಪೋತ್ಸವ ನಡೆಸಲಾಗುತ್ತದೆ. ಶನಿವಾರ ಬಿಳಿಗಿರಿರಂಗನಾಥಸ್ವಾಮಿ ತೆಪ್ಪೋತ್ಸವ ಸಂಪನ್ನವಾಯಿತು.
7ನೇ ದಿನವಾದ ಭಾನುವಾರ ಇಲ್ಲಿರುವ ಮತ್ತೊಂದು ಪೌರಾಣಿಕ ದೇಗುಲವಾದ ಶ್ರೀಗಂಗಾಧರೇಶ್ವರಸ್ವಾಮಿಯ ತೆಪ್ಪ ನಡೆಯುತ್ತದೆ. ಆ ದಿನ ಗಂಗಾಧರೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವ ನೆರವೇರಿಸಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net