ಗಬ್ಬು ನಾರುತ್ತಿರುವ ಕಸದ ರಾಶಿ

ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಕಸದ ರಾಶಿ.
ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಕಸದ ರಾಶಿ.
Published on
ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಕಾಡಂಚಿನ ದೊಡ್ಡ ಗ್ರಾಮವಾಗಿರುವ ಯರಗಂಬಳ್ಳಿಯಲ್ಲಿ ಮುಖ್ಯರಸ್ತೆ ಹಾಗೂ ಶುದ್ಧ ಕುಡಿಯುವ ನೀರಿನ ತೊಟ್ಟಿಯ ಬಳಿಯಲ್ಲಿ ಕಸ ರಾಶಿ ರಾಶಿಯಾಗಿ ಬಿದ್ದಿದ್ದು ಈಚೆಗೆ ಸುರಿದ ಮಳೆಯಿಂದ ಕೊಳೆತು ಗಬ್ಬು ನಾರುತ್ತಿದೆ.
ಗ್ರಾಮದ ಪಂಚಾಯಿತಿ ಕಟ್ಟಡದ ಹಿಂಭಾಗದಲ್ಲೇ ಶುದ್ಧ ಕುಡಿಯುವ ನೀರಿನ ಘಟಕವಿದೆ. ಈ ಘಟಕ ಕೆಟ್ಟು ನಿಂತು ಹಲವು ತಿಂಗಳೇ ಕಳೆದಿವೆ. ಇದರ ಸನಿಹವೇ ಗ್ರಾಮದ ಅನೇಕರು ಕಸ ಸುರಿಯುತ್ತಾರೆ. ಅಲ್ಲದೆ ಇದರ ಬಳಿ ತಿಪ್ಪೆ ನಿರ್ಮಾಣವಾಗಿದೆ.
ಈ ಕಸದಲ್ಲಿ ಒಣ, ಹಸಿ ಕಸ, ಪ್ರಾಣಿಜನ್ಯ ತ್ಯಾಜ್ಯ, ಕೋಳಿ ಅಂಗಡಿಗಳಿಂದ ಸಂಗ್ರಹವಾಗುವ ತ್ಯಾಜ್ಯವನ್ನು ಸುರಿಯಲಾಗಿದೆ. ಈಚೆಗೆ ಸುರಿದ ಮಳೆಯಿಂದ ಈ ಕಸವೆಲ್ಲ ಕೊಳೆತು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಇದೆ.
ಕಸದ ರಾಶಿಯ ಅಕ್ಕ ಪಕ್ಕದಲ್ಲೇ ವಾಸದ ಮನೆಗಳಿವೆ. ಈ ರಸ್ತೆ, ಗಂಗವಾಡಿ, ದಾಸನಹುಂಡಿ, ಮುರಟಿಪಾಳ್ಯ. ಕೆ.ದೇವರಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಇಲ್ಲಿಂದ ತೆರಳುವ ಪ್ರಯಾಣಿಕರು ಮೂಗು ಮುಚ್ಚಿ ಸಂಚರಿಸುವ ಪರಿಸ್ಥಿತಿ ಇದೆ.
ತ್ಯಾಜ್ಯಕ್ಕೆ ಬೀಳುತ್ತಿದೆ ಬೆಂಕಿ:
ಈ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಇಲ್ಲೇ ಬಿಡಲಾಗಿದ್ದು ಇದನ್ನು ನಿರ್ಮೂಲನೆ ಮಾಡಲು ಕೆಲವು ಬಾರಿ ಇದಕ್ಕೆ ಬೆಂಕಿ ಹಚ್ಚಲಾಗುತ್ತದೆ. ಆದರೆ ಈ ಕಸದಲ್ಲಿ ದೇಹಕ್ಕೆ ಮಾರಕವಾಗಬಲ್ಲ ಅಪಾಯಕಾರಿ ತ್ಯಾಜ್ಯ ಬೆಂಕಿಯಲ್ಲಿ ಸುಡುತ್ತವೆ. ಹಾಗಾಗಿ ಇದರ ಹೊಗೆ ಸುತ್ತಲೂ ದಟ್ಟವಾಡಿ ಆವರಿಸುತ್ತದೆ. ಇದರ ಸುತ್ತಲೂ ವಾಸದ ಮನೆಗಳಿದ್ದು ಸಾರ್ವಜನಿಕರು ಈ ಬೆಂಕಿ ಆರುವ ತನಕವೂ ಉಸಿರಾಡಲು ಪರದಾಡುವ ಪರಿಸ್ಥಿತಿ ಇದೆ.
ಈ ಕಸದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಗಳ ತ್ಯಾಜ್ಯವೇ ಅಧಿಕವಾಗಿದೆ. ಇಲ್ಲಿ ಗ್ರಾಮದ ದನ, ಕರುಗಳು ಮೇವನ್ನರಿಸಿ ಬರುತ್ತವೆ. ಆದರೆ ಈ ತ್ಯಾಜ್ಯವು ಇವುಗಳ ಹೊಟ್ಟೆ ಸೇರುವ ಅಪಾಯವೂ ಹೆಚ್ಚಾಗಿದೆ. ಪ್ಲಾಸ್ಟಿಕ್ ಕಣಗಳು ಜಾನುವಾರುಗಳ ದೇಹ ಹೊಕ್ಕಿದ್ದು, ಅದಕ್ಕೆ ಹಲವು ಹೈನುಗಾರರು ಸ್ಥಳೀಯ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವ ಉದಾಹರಣೆಗಳೂ ಇವೆ.
ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ: ಈ ಸ್ಥಳದಲ್ಲಿ ಗ್ರಾಮದಲ್ಲಿ ಶೇಖರಣೆಯಾಗುವ ಕಸವನ್ನು ತಂದು ಸುರಿಯಲಾಗುತ್ತದೆ. ಇದನ್ನು ಸೂಕ್ತವಾಗಿ ಬೇರೆಡೆ ವಿಲೇವಾರಿ ಮಾಡಬೇಕು. ಈ ಸ್ಥಳ ಗ್ರಾಮದ ಹೆಬ್ಬಾಗಿಲಾಗಿದ್ದು, ಗ್ರಾಮಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕಸ ಸ್ವಾಗತ ಕೋರುತ್ತದೆ. ಮಳೆ ಬಂದರೆ ಇಲ್ಲಿರುವ ಚರಂಡಿ, ಕಾಲುವೆಗಳಿಗೆ ಈ ಕಸ ನೀರಿನೊಂದಿಗೆ ಸೇರಿ ನುಗ್ಗುತ್ತದೆ. ಸರಾಗವಾಗಿ ನೀರು ಹರಿಯಲು ಇದು ಅಡ್ಡಿಯಾಗಿದೆ. ಇದಕ್ಕೆ ಆಗಾಗ ಬೆಂಕಿ ಹಚ್ಚುವುದರಿಂದ ಇಲ್ಲಿನ ಜನರ ಆರೋಗ್ಯದ ಮೇಲೂ ಇದು ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಇದನ್ನು ಇಲ್ಲಿಂದ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ದೂರು ನೀಡಿದ್ದರೂ ಇಲ್ಲಿನ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ ಎಂಬುದು ಇಲ್ಲಿನ ಲೋಕೇಶ್, ಮಹೇಶ್, ಸುರೇಶ್ ಸೇರಿದಂತೆ ಅನೇಕ ನಾಗರಿಕರ ದೂರಾಗಿದೆ.
ಗ್ರಾಮವನ್ನು ಸ್ವಚ್ಛಗೊಳಿಸುವಂತೆ ಸಂಬಂಧಪಟ್ಟ ಪಿಡಿಒಗೆ ಸೂಚನೆ ನೀಡಲಾಗುವುದು. ರಸ್ತೆಯ ಬದಿಯಲ್ಲಿ ಕಸ ಸುರಿಯದಂತೆ ಮಾರ್ಗದರ್ಶನ ನೀಡಲಾಗುವುದು. ಅಲ್ಲದೆ ಶುದ್ಧ ಕುಡಿಯುವ ನೀರಿನ ಘಟಕದ ಸ್ವಚ್ಛತೆ ಹಾಗೂ ಇದರ ದುರಸ್ತಿಗೂ ಕ್ರಮ ವಹಿಸಲಾಗುವುದು.
ಎ.ಬಿ.ವೇಣು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net