ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಈ ಗ್ರಾಮದ ಜಮೀನುಗಳಿಗೆ ಕಾಡಾನೆಗಳು ಹಲವು ತಿಂಗಳಿನಿಂದ ಆಗಾಗ್ಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಲೇ ಇವೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಆದರೆ ಕಾಡಾನೆಯ ಹಾವಳಿ ತಪ್ಪಿಲ್ಲ. ಇದರಿಂದ ಈ ಭಾಗದ ರೈತರು ರೋಸಿ ಹೋಗಿದ್ದು, ಇತ್ತೀಚೆಗೆ ಅರಣ್ಯ ಇಲಾಖೆಯ ಕಚೇರಿ ಮುಂದೆ ರೈತರು ಪ್ರತಿಭಟನೆಯನ್ನು ನಡೆಸಿದ್ದರು. ಈ ವೇಳೆ ಡಿಸಿಎಫ್ ಸುರೇಂದ್ರ ಅವರು ಅಗತ್ಯ ಭರವಸೆಯನ್ನು ನೀಡಿದ್ದರು. ಆದರೆ ಯಾವುದೇ ಕ್ರಮವಾಗಿಲ್ಲ. ಪರಿಣಾಮ ಭಾನುವಾರ ಬೆಳಗಿನ ಜಾವ ಕಾಡಾನೆಗಳು ಗ್ರಾಮದ ಗೋವಿಂದಯ್ಯ ಎಂಬುವರ ಜಮೀನಿಗೆ ಲಗ್ಗೆ ಇಟ್ಟು ಸೋಲಾರ್ ತಂತಿ ಹಾಗೂ ಮುಸುಕಿನ ಜೋಳದ ಫಸಲನ್ನು ನಾಶಪಡಿಸಿವೆ. ಈ ಸಂಬಂಧ ಗ್ರಾಮಸ್ಥರು ಮಾತನಾಡಿ, ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಕಾಡಾನೆಗಳಿಗೆ ಕಡಿವಾಣ ಹಾಕಬೇಕು. ಜತೆಗೆ ಬೆಳೆನಷ್ಟಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಒತ್ತಾಯಿಸಿದ್ದಾರೆ.