ಹನೂರು: ತಾಲೂಕಿನ ವೈಶಂಪಾಳ್ಯ ಗ್ರಾಮದ ಜಮೀನಿನ ಬಾವಿಯೊಂದಕ್ಕೆ ಭಾನುವಾರ ಆಯತಪ್ಪಿ ಬಿದ್ದಿದ್ದ ಕಾಡು ಹಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದ್ದಾರೆ.
ಗ್ರಾಮದ ಲಿಂಗರಾಜು ಎಂಬುವರ ಜಮೀನಿನಲ್ಲಿದ್ದ 70 ಅಡಿ ಆಳದ 5 ಅಡಿ ನೀರಿದ್ದ ಬಾವಿಗೆ ಭಾನುವಾರ ಬೆಳಗ್ಗೆ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡು ಹಂದಿಯೊಂದು ಆಯತಪ್ಪಿ ಬಿದ್ದಿದೆ. ಇದನ್ನು ಗಮನಿಸಿದ ಲಿಂಗರಾಜು ಅವರು ಈ ಬಗ್ಗೆ ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹಂದಿಯನ್ನು ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಹಂದಿಯನ್ನು ಅರಣ್ಯ ಪ್ರದೇಶದತ್ತ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಸಿಬ್ಬಂದಿ ಪೆರಿಯ ನಾಯಗಂ, ಮಹೇಶ್ ಕುಮಾರ್, ಹರ್ಷ, ಲೋಕೇಶ್, ಅರಣ್ಯ ಇಲಾಖೆ ಸಿಬ್ಬಂದಿ ಚಿನ್ನಸ್ವಾಮಿ, ರಾಯಪ್ಪ, ನಿಂಗರಾಜು, ನಂದೀಶ್, ಅಭಿ ಹಾಗೂ ಕೃಷ್ಣ ಭಾಗವಹಿಸಿದ್ದರು.