ಹನೂರು: ಭಗೀರಥ ಮಹರ್ಷಿಗಳು ಅವಿರತ ಪ್ರಯತ್ನ ಮಾಡುವ ಮೂಲಕ ದೇವಗಂಗೆಯನ್ನು ಧರೆಗಿಳಿಸಿದ್ದು, ಇವರ ಆದರ್ಶ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಗುರುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಭಗೀರಥ ಮಹರ್ಷಿಗಳು ಮಹಾರಾಜರಾಗಿದ್ದು, ಸಕಲ ವೈಭವಗಳಿದ್ದರೂ ದೇವಗಂಗೆಯನ್ನು ಪಡೆಯಬೇಕು ಎನ್ನುವ ತಂದೆ ಹಾಗೂ ತಾತಂದಿರ ಆಸೆಯನ್ನು ಈಡೇರಿಸಲಾಗಲಿಲ್ಲ. ಇದರಿಂದ ಪ್ರತಿಜ್ಞೆ ಮಾಡಿದ ಮಹರ್ಷಿಗಳು ಘೋರ ತಪಸ್ಸು ಮಾಡಿ ಸ್ವರ್ಗದಿಂದ ದೇವಗಂಗೆಯನ್ನು ಧರೆಗಿಳಿಸುವುದರ ಮೂಲ ಪಿತೃಗಳಿಗೆ ಸ್ವರ್ಗ ದೊರಕಿಸಿಕೊಟ್ಟರು. ಹಾಗಾಗಿ ಇವರ ಸಾಧನೆ ಅಸಾಮಾನ್ಯ. ಇವರ ಛಲ ಎಲ್ಲರಿಗೂ ಆದರ್ಶವಾಗಿದ್ದು, ಸಾಧಕರಿಗೆ ಸ್ಫೂರ್ತಿದಾಯಕವಾಗಿದೆ. ಪ್ರತಿಯೊಬ್ಬರೂ ಸಂಘಟಿತರಾಗುವುದರ ಮೂಲಕ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಮುಂದಿನ ದಿನಗಳಲ್ಲಿ ನಡೆಯುವ ಶ್ರೀಗಳ ವಿಜೃಂಭಣೆಯ ಜಯಂತಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಹನೂರು ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನೀರನ್ನು ಒದಗಿಸುವುದು ಸವಾಲಿನ ಕೆಲಸವಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ನನೆಗುದಿಗೆ ಬಿದ್ದಿರುವ ಕಾಮಗಾರಿ ಸಂಬಂಧ ಈಗಾಗಲೇ ಅಗತ್ಯ ಕ್ರಮವಹಿಸಲಾಗಿದ್ದು, ಸದ್ಯದಲ್ಲಿಯೇ ಅನುಮತಿ ಸಿಗಲಿದೆ. 4 ತಿಂಗಳೊಳಗಾಗಿ ತಾಲೂಕಿನ ಎಲ್ಲ ಮನೆಗಳಿಗೂ ಸಮರ್ಪಕ ನೀರು ದೊರಕಲಿದೆ ಎಂದರು.
ಬಿಇಒ ಮಹೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಕೆಂಪರಾಜು, ಪಪಂ ಮುಖ್ಯಾಧಿಕಾರಿ ರೇಖಾ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಮುಖಂಡರಾದ ನಿಂಗಶೆಟ್ಟಿ, ರಂಗಸ್ವಾಮಿ, ನಾಗಸುಂದ್ರ, ಶ್ರೀನಿವಾಸ್, ಮಂಜು, ದಾಸಶೆಟ್ಟಿ ಇತರರಿದ್ದರು.