‘ಕೆರೆಗೆ ನೀರು’ ಬಿಜೆಪಿಯಿಂದ ಕುತಂತ್ರ ರಾಜಕೀಯ

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರೊಂದಿಗೆ ಗಣೇಶ್ ಪ್ರಸಾದ್ ಚರ್ಚಿಸಿದರು.
ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರೊಂದಿಗೆ ಗಣೇಶ್ ಪ್ರಸಾದ್ ಚರ್ಚಿಸಿದರು.
Published on
ಗುಂಡ್ಲುಪೇಟೆ: ತಾಲೂಕಿನ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಕೆರೆಯಿಂದ ಕೆರೆಗೆ ಪೈಪ್‌ಲೈನ್ ಅಳವಡಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು. ಆಲಂಬೂರು ಏತನೀರಾವರಿ ಯೋಜನೆಯಲ್ಲಿ ಎದುರಾಗಿದ್ದ ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕುತಂತ್ರ ಆರಂಭಿಸುತ್ತಿದ್ದಾರೆ.
ತಾಲೂಕಿನ ವಡ್ಡಗೆರೆ ಕೆರೆ ತುಂಬಿಸಿ ಮುಂದಿನ ಕೆರೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಬಿಜೆಪಿಯವರು ಮೂರನೇ ಹಂತದ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ಮೂಲಕ ನಾಲ್ಕನೇ ಹಂತದ ಕೆರೆಗಳಿಗೆ ನೀರು ಹರಿಯದಂತೆ ವ್ಯವಸ್ಥಿತವಾಗಿ ಸಂಚು ಮಾಡುತ್ತಿದ್ದಾರೆ. ಮರುದಿನ ತಾಲೂಕಿನಲ್ಲಿ ಬಿಜೆಪಿಯವರು ರೈತ ಮುಖಂಡರನ್ನು ಹೊರಗಿಟ್ಟು ಪಟ್ಟಣದಲ್ಲಿಯೂ ಪ್ರತಿಭಟನೆ ಕೈಗೊಂಡು ನನ್ನ ಮೇಲೆ ಕೆಟ್ಟ ಭಾವನೆ ಬರುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಮಸ್ಯೆ ಪರಿಹರಿಸಲು 110 ಕೆರೆಗಳಿಗೆ ನೀರು ತುಂಬಿಸುವ 475 ಕೋಟಿ ರೂ.ವೆಚ್ಚದ ಯೋಜನೆಯಲ್ಲಿ ಕೆರೆಯಿಂದ ಕೆರೆಗೆ ಪೈಪ್ ಲೈನ್ ಅಳವಡಿಸಲಾಗುವುದು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಹದೇವಪ್ಪ, ಕಾರ್ಯಾಧ್ಯಕ್ಷ ಕುಮಾರ್, ತಾಲೂಕು ಅಧ್ಯಕ್ಷ ಶಿವಣ್ಣ, ಸೋಮಶೇಖರ್, ತಾಲೂಕು ಗೌರವಾಧ್ಯಕ್ಷ ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿ ಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ, ತಾಲೂಕು ಉಪಾಧ್ಯಕ್ಷ ಪುಟ್ಟೇಗೌಡ, ಸಂಘಟನಾ ಕಾರ್ಯದರ್ಶಿ ರವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net