ಭೂಸ್ವಾಧೀನ ವಿರೋಧಿಸಿ ಉರುಳು ಸೇವೆ ಭೂಸ್ವಾಧೀನ ವಿರೋಧಿಸಿ ಉರುಳು ಸೇವೆ
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ರೈತರು ಉರುಳುಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ಪ್ರತಿಭಟನೆ
ಪೊರಕೆ ಹಿಡಿದು ಮಹಿಳೆಯರಿಂದ ಆಕ್ರೋಶ
ಚಾಮರಾಜನಗರ: ರೈತರ ಹುತಾತ್ಮ ದಿನಾಅಚರಣೆ ಅಂಗವಾಗಿ ರಾಜ್ಯ ಸರ್ಕಾರ ಬಿಡದಿ ಬೈರಮಂಗಲದ ಭೂ ಸ್ವಾಧೀನ ವಿರೋಧಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ರೈತರು ಉರುಳುಸೇವೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ರೈತರು, ಅಲ್ಲಿಂದ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್ ಮಾತನಾಡಿ, ರಾಜ್ಯದಲ್ಲಿ ನವಲಗುಂದದಲ್ಲಿ ನಡೆದ ರೈತರ ಹೋರಾಟದ ನೆನಪಿನಾರ್ಥ ಹಾಗೂ ಬಲವಂತದ ಭೂಸ್ವಾಧೀನವನ್ನು ವಿರೋಧಿಸಿ ಈ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಹಾದಿಯಾಗಿ ಎಲ್ಲ ಪಕ್ಷಗಳಲ್ಲೂ ಭೂಗಳ್ಳರಾಗಿದ್ದಾರೆ. ಈ ಕಾರಣಕ್ಕೆ ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ರೈತನ ಭೂಮಿಯನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿದರು.
2013-14 ನೇ ಸಾಲಿನಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ರೂಪಿಸಿದ್ದ ಭೂಸ್ವಾಧೀನ ವಿರೋಧಿ ಕಾನೂನನ್ನು ಮಾಡಿದ್ದರು. ಆದರೆ ಆ ಕಾನೂನಿಗೆ ತಿದ್ದುಪಡಿ ತಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಇಂದಿನ ಡಿ.ಕೆ.ಶಿವಕುಮಾರ್ ಅವರು ರೈತರ ಭೂಮಿಯನ್ನು ಕಿತ್ತುಕೊಂಡಿದ್ದಾರೆ. ಬಲವಂತವಾಗಿ ಫಲವತ್ತಾದ ಭೂಮಿಯನ್ನು ಕಿತ್ತು ಕೈಗಾರಿಕೆಗಳಿಗೆ ನೀಡುವುದರಿಂದ ರೈತರು ಬೀದಿಗೆ ಬರುವಂತಾಗಿದೆ ಎಂದರು.
ಕೇಂದ್ರ ಸರ್ಕಾರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಅತ್ಯಂತ ಖಂಡನೀಯ. ವಿದ್ಯಾರ್ಥಿಗಳ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಕೇಂದ್ರ ಶಿಕ್ಷಣ ಧರ್ಮೆಂದ್ರ ಪ್ರಧಾನ್ ಅವರು ರಾಜೀನಾಮೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯನ್ನು ಬರಗಾಲ ಪ್ರದೇಶವೆಂದ ಘೋಷಿಸಿ ತಕ್ಷಣ ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವನ್ನು ಒದಗಿಸಬೇಕು. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋ ಶಾಲೆ ತೆರೆಯಬೇಕು. ಮಲೈ ಮಾದೇಶ್ವರ ಬೆಟ್ಟದ ಸುತ್ತಮುತ್ತ ಕಾವೇರಿ ವನ್ಯಜೀವಿ ಡಿಸಿಎಫ್ ಅವರಿಂದ ಕಿರುಕುಳವಾಗುತ್ತಿದ್ದು, ತಕ್ಷಣ ಇದು ನಿಲ್ಲಬೇಕು. ಆಲಂಬಾಡಿಯಲ್ಲಿ ದನಗಳ ಮೇಯಿಸುವ ರೈತರ ಮೇಲೆ ಮತ್ತು ಗುಡಿಸಲ ಮೇಲೆ ಬೆಂಕಿ ಹಾಕಿರುವವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಚಂಗಡಿ ಕರಿಯಪ್ಪ ಮಾತನಾಡಿ, ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ರೈತರ ಸಮಸ್ಯೆ ಹೇರಳವಾಗಿದೆ. ಅರಣ್ಯ ಇಲಾಖೆಯವರು ರೈತರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಕಾಡಿನಿಂದ ನಾಡಿಗೆ ಚಂಗಡಿ ಗ್ರಾಮವನ್ನು ಸ್ಥಳಾಂತರ ಮಾಡುತ್ತೇವೆ ಎಂದು ಘೋಷಣೆ ಮಾಡಿ 6 ವರ್ಷಗಳಾಗಿವೆ. ಆದರೆ ಅದು ಘೋಷಣೆಯಾಗಿಯೇ ಉಳಿದಿದೆ. ಇತ್ತೀಚೆಗೆ ಯಾವ ಜನಪ್ರತಿನಿಧಿಗಳು ಕೂಡ ಜನಪರವಾಗಿ ನಡೆದುಕೊಳ್ಳುತ್ತಿಲ್ಲ. ಈಗ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರು ಕೂಡ ಸಾವಿರಾರು ಕೋಟಿ ರೂ, ಹಣವನ್ನು ಕೊಟ್ಟು, ರೈತರ ಜಮೀನು ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಬಂದಿಗೌಡನಹಳ್ಳಿ ನಟರಾಜು, ಪಾಪಣ್ಣ, ಶಿವಕುಮಾರ್, ಮಾಡ್ರಳ್ಳಿ ಪಾಪಣ್ಣ, ಶಶಿ, ರಾಜು, ಪುಣಜನೂರು ಚಂದ್ರು, ಬರಗಿ ಮಹೇಶ್, ಮೂಡ್ನಾಕೂಡು ಮಂಜು, ಕೊತ್ತಲವಾಡಿ ಮಂಜು, ಮುಕ್ತಿ ಕಾಲೋನಿ ರಾಣಿ ಹಾಗೂ ಇತರರು ಭಾಗವಹಿಸಿದ್ದರು.
ಉರುಳುಸೇವೆ ಮೂಲಕ ಭೂಸ್ವಾಧೀನಕ್ಕೆ ವಿರೋಧ:
ಬಿಡದಿ ಸಮೀಪದ ಭೈರಮಂಗಲ ಭೂಸ್ವಾಧೀನ ಹಾಗೂ ಇನ್ನಿತರೆ ಕಡೆಗಳಲ್ಲಿ ಬಲವಂತವಾಗಿ ರೈತರಿಂದ ಭೂಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ರೈತರು ಉರುಳುಸೇವೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸದರು. ಶ್ರೀಭುವನೇಶ್ವರಿ ವೃತ್ತದಿಂದ ಬಿ.ರಾಚಯ್ಯ ಜೋಡಿ ರಸ್ತೆಯುದ್ದಕ್ಕೂ ಉರುಳು ಸೇವೆ ಮಾಡಿದ ಹಲವಾರು ರೈತರು , ಯಾವುದೇ ಕಾರಣಕ್ಕೂ ಬಲವಂತವಾಗಿ ರೈತರಿಂದ ಭೂಮಿಯನ್ನು ಕಿತ್ತುಕೊಳ್ಳಬಾರದು ಎಂದು ಆಗ್ರಹಿಸಿದರು. ರೈತ ಮಹಿಳೆಯರು ಪ್ರತಿಭಟನೆಯುದ್ಧಕ್ಕೂ ಪೊರಕೆಯನ್ನು ಹಿಡಿದು ಆಕ್ರೋಶ ಹೊರಹಾಕಿದರು.