ಜ.31 ರಿಂದ ವಡಕೆಹಳ್ಳ ಗ್ರಾಮದಲ್ಲಿ ಅನಿರ್ಧಿಷ್ಟ ಚಳವಳಿ

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶೈಲೇಂದ್ರ ಮಾತನಾಡಿದರು. ಮುಖಂಡರು ಹಾಜರಿದ್ದರು.
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶೈಲೇಂದ್ರ ಮಾತನಾಡಿದರು. ಮುಖಂಡರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ಜಿಲ್ಲಾಸಂಚಾಲಕ ಶೈಲೇಂದ್ರ ಮಾಹಿತಿ
  • ಜಿಲ್ಲಾಡಳಿತದ ರೈತವಿರೋಧಿ ನೀತಿ ಖಂಡನೆ
  • ದಂಟಳ್ಳಿ ಏತನೀರಾವರಿ ಯೋಜನೆ ಡಿಪಿಆರ್‌ಗೆ ಒತ್ತಾಯ
ಚಾಮರಾಜನಗರ: ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ವತಿಯಿಂದ ಜ.31 ರಿಂದ ಅನಿರ್ಧಿಷ್ಟ ಆಹೋರಾತ್ರಿ ರಸ್ತೆತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ಜಿಲ್ಲಾಸಂಚಾಲಕ ಶೈಲೇಂದ್ರ ತಿಳಿಸಿದರು.
ದಂಟಳ್ಳಿ ಏತ ನೀರಾವರಿ ಯೋಜನೆಗೆ ಡಿಪಿಆರ್ ತಯಾರಿಸಲು ಇಚ್ಛಾಶಕ್ತಿ ಪ್ರದರ್ಶಿಸದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಹನೂರು ಶಾಸಕರು ಹಾಗೂ ಜಿಲ್ಲಾಡಳಿತದ ರೈತವಿರೋಧಿ ನೀತಿ ಖಂಡನೀಯ. ದಂಟಳ್ಳಿ ಏತನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಕಳೆದ 88ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ, ಕ್ಷೇತ್ರದ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಅಹವಾಲು ಆಲಿಸಿಲ್ಲ. ದಂಟಳ್ಳಿ ಏತನೀರಾವರಿ ಯೋಜನೆ ಜಾರಿಗೆ ಡಿಪಿಆರ್‌ಮಾಡಿಸಿ, ಈ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಸಿಗುವವರಗೆ ಅನಿರ್ಧಿಷ್ಟ ಆಹೋರಾತ್ರಿ ರಸ್ತೆತಡೆ ಚಳವಳಿ ಮುಂದುವರೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹನೂರು ತಾಲೂಕಿನ ರಾಮಾಪುರಹೋಬಳಿಯ ಮಾರ್ಟಳ್ಳಿ, ಶೆಟ್ಟಹಳ್ಳಿ, ಕುರಟ್ಟಿಹೊಸೂರು, ರಾಮಾಪುರ, ಕೌದಳ್ಳಿ, ಮಹದೇಶ್ವರಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ವಡಕೆಹಳ್ಳ ಗ್ರಾಮಗಳಲ್ಲಿ ಕಳೆದ 20ವರ್ಷಗಳಿಂದ ಸಮರ್ಪಕ ಮಳೆಬೀಳದ ಕಾರಣ, 1200 ಅಡಿ ಕೊಳವೆಬಾವಿ ಕೊರೆದರೂ, ನೀರು ಸಿಗುತ್ತಿಲ್ಲ. ಅಂತರ್ಜಲ ಕುಸಿದಿರುವ ಪರಿಣಾಮ ಇಲ್ಲಿನ ಕೃಷಿಕುಟುಂಬಗಳು ಉದ್ಯೋಗ ಅರಸಿ, ನೆರೆರಾಜ್ಯ, ನೆರೆಜಿಲ್ಲೆಗಳತ್ತ ವಲಸೆಹೋಗಿದ್ದಾರೆ. ಕಾವೇರಿನದಿಯಿಂದ ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಸೌಲಭ್ಯ ಕಲ್ಪಿಸಿದರೆ, ಅಂತರ್ಜಲ ಹೆಚ್ಚುತ್ತದೆ. ಈಗಾಗಲೇ ಕಾವೇರಿನ್ಯಾಯಮಂಡಳಿ ತನ್ನ ಅಂತಿಮತೀರ್ಪಿನಲ್ಲಿ 63.83 ಟಿಎಂಸಿ ನೀರನ್ನು ಬಳಸಿಕೊಳ್ಳುವಂತೆ ತಿಳಿಸಿದೆ. 2009-10 ನೇ ಸಾಲಿನಲ್ಲಿ ರಾಜ್ಯಸರ್ಕಾರ ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರುತುಂಬಿಸುವ ಸಲುವಾಗಿ ಸಾಕಷ್ಟು ಅನುದಾನನೀಡಿದೆ ಎಂದರು.
ವಡಕೆಹಳ್ಳದಲ್ಲಿ ರೈತರ ಅನಿರ್ಧಿಷ್ಟ ಆಹೋರಾತ್ರಿರಸ್ತೆತಡೆ ಚಳವಳಿ ನಡೆಯಲಿರುವ ಹಿನ್ನೆಲೆ ರಾಜ್ಯದವಿವಿಧೆಡೆಯಿಂದ ಮಲೆಮಹದೇಶ್ವರಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳು, ಪಾದಯಾತ್ರಿಗಳು, ವಾಹನಗಳ ಚಾಲಕರು ಕಾರ್ಯಕ್ರಮ ಮುಂದೂಡಿ, ರೈತರ ಅನಿರ್ಧಿಷ್ಟ ಆಹೋರಾತ್ರಿರಸ್ತೆತಡೆ ಚಳವಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂದನಪಾಳ್ಯದ ಎನ್.ರಾಜು, ಅರುಳ್‌ದಾಸ್, ಮೋಳೆರಾಜು, ಜಾನ್‌ಪೌಲ್, ಆರ್.ಆರ್.ಅರ್ಬುದರಾಜ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net