ಹನೂರು: ಸಮೀಪದ ಮಹಾಲಿಂಗನಕಟ್ಟೆ ಗ್ರಾಮದ ಜಮೀನಿನ ಕೊಟ್ಟಿಗೆಗೆ ಶುಕ್ರವಾರ ಚಿರತೆಯೊಂದು ಲಗ್ಗೆ ಇಟ್ಟು ಎರಡು ಮೇಕೆಗಳನ್ನು ಬಲಿ ಪಡೆದಿದೆ.
ಹನೂರಿನ ಸಿದ್ದೇಗೌಡ ಎಂಬುವರು ಮಹಾಲಿಂಗನಕಟ್ಟೆಯ ಬಳಿ ಜಮೀನನ್ನು ಹೊಂದಿದ್ದು, 8 ಮೇಕೆಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಆದರೆ ಬೆಳಗ್ಗೆ ಸುಮಾರು 7 ಗಂಟೆ ಸುಮಾರಿನಲ್ಲಿ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಚಿರತೆ ಕೊಟ್ಟಿಗೆಗೆ ಲಗ್ಗೆ ಇಟ್ಟು ಎರಡು ಮೇಕೆಗಳನ್ನು ಸಾಯಿಸಿದೆ. ಈ ಬಗ್ಗೆ ಸುದ್ದಿ ತಿಳಿಸಲಾಗಿ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು. ಮೃತಪಟ್ಟ ಮೇಕೆಗೆ ಇಲಾಖೆಯಿಂದ ಪರಿಹಾರ ದೊರಕಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ಆದರೆ ಈ ಭಾಗದಲ್ಲಿ ಕಳೆದ ಹಲವು ತಿಂಗಳಿನಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಸೆರೆ ಹಿಡಿಯದ ಪರಿಣಾಮ ಆಗಾಗ್ಗೆ ದಾಳಿ ನಡೆಸುತ್ತಲೇ ಇದ್ದು, ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿದೆ. ಆದ್ದರಿಂದ ಈ ಬಗ್ಗೆ ನಿಗಾ ವಹಿಸಿ ಚಿರತೆಯನ್ನು ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದರು.