ಗುಂಡ್ಲುಪೇಟೆ ನಿಲ್ದಾಣದಲ್ಲಿ ಸಕಾಲಕ್ಕೆ ಬಾರದ ಸಾರಿಗೆ ಬಸ್

ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಸಂಜೆ ಸಮಯದಲ್ಲಿ ಮೈಸೂರಿಗೆ ಹೋಗುವ ಬಸ್‌ಗಾಗಿ ಪ್ರಯಾಣಿಕರು ಕಾದುನಿಂತಿರುವುದು.
ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಸಂಜೆ ಸಮಯದಲ್ಲಿ ಮೈಸೂರಿಗೆ ಹೋಗುವ ಬಸ್‌ಗಾಗಿ ಪ್ರಯಾಣಿಕರು ಕಾದುನಿಂತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಾರಿಗೆ ಬಸ್ ನಿಲ್ದಾಣ
  • ಸಕಾಲಕ್ಕೆ ಬಸ್‌ಗಳ ಸಂಚಾರವಿಲ್ಲ
ಗುಂಡ್ಲುಪೇಟೆ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಸಕಾಲಕ್ಕೆ ಬಸ್‌ಗಳ ಸಂಚಾರವಿಲ್ಲದ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಮೈಸೂರು, ನಂಜನಗೂಡು, ಚಾಮರಾಜಗರ ಮುಂತಾದ ಕಡೆಗೆ ಕೆಲಸಕ್ಕೆ ಹೋಗುವ ಉದ್ಯೋಗಿಗಳು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಎಪಿಎಂಸಿ ಕೆಲಸಕ್ಕೆ ಹೋಗುವ ಕಾರ್ಮಿಕರು ಬೆಳಗ್ಗೆ 7 ರಿಂದ 9 ಸಂಜೆ 4 ರಿಂದ 6 ಗಂಟೆವರೆಗೆ ಪ್ರಯಾಣಿಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ನಿಲ್ದಾಣದಲ್ಲಿ ಬಸ್‌ಗಳ ಕೊರತೆಯಿದ್ದು ಒಮ್ಮೊಮ್ಮೆ ಗಂಟೆಗಟ್ಟಲೇ ಕಾದರೂ ಬಸ್ ಬಾರದೆ ಸಕಾಲಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಾರ್ಮಿಕರಿಗೆ ಒಂದು ದಿನದ ಕೂಲಿ, ವಿದ್ಯಾರ್ಥಿಗಳಿಗೆ ತರಗತಿಗಳು ಹಾಗೂ ಉದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ಪಟ್ಟಣದಲ್ಲಿ 1985 ರಲ್ಲಿ ಆರಂಭವಾದ ಸಾರಿಗೆ ಘಟಕ ಜಿಲ್ಲೆಯ ಮೊದಲ ಹಾಗೂ ದೊಡ್ಡ ಡಿಪೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಪ್ರಯಾಣಿಕರು ಹೆಚ್ಚಾಗಿ ಹೋಗುವ ಸಮಯದಲ್ಲಿ ಮೈಸೂರು ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಸಾಕಷ್ಟು ಬಸ್ ಸೌಕರ್ಯಗಳಿಲ್ಲದೆ ಪ್ರತಿ ದಿನವೂ ಪರದಾಡುತ್ತಿರುವುದು ಸಾರ್ವಜನಿಕರ ಆಕ್ರೋಶವನ್ನು ಹೆಚ್ಚಿಸುತ್ತಿದೆ.
ಪಟ್ಟಣದ ಘಟಕದಲ್ಲಿರುವ 140 ಬಸ್‌ಗಳು ಗ್ರಾಮಾಂತರ ಪ್ರದೇಶಗಳಲ್ಲದೆ, ಜಿಲ್ಲಾ ಕೇಂದ್ರ, ಮೈಸೂರು, ಬೆಂಗಳೂರು ಸೇರಿದಂತೆ ಪ್ರವಾಸಿ ತಾಣಗಳಾದ ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಕೊಂಗಳ್ಳಿಬೆಟ್ಟ, ಧರ್ಮಸ್ಥಳ, ಹೊರನಾಡು ಹಾಗೂ ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡುಗಳಿಗೂ ಸಂಚರಿಸುತ್ತಿವೆ. ಆದರೆ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಘಟಕದಲ್ಲಿ ಬಸ್‌ಗಳನ್ನು ಸರಿಯಾಗಿ ನಿರ್ಹವಣೆ ಮಾಡದ ಪರಿಣಾಮ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ಹೋಗಲು ಪರದಾಡುವಂತಾಗಿದೆ.
ಎರಡೂವರೆ ವರ್ಷದ ಹಿಂದೆ ರಾಜ್ಯ ಸರ್ಕಾರ ಶಕ್ತಿ ಯೋಜನೆ ಆರಂಭಿಸಿದ ನಂತರ ಪ್ರತಿ ದಿನವೂ ಬಸ್‌ಗಳಲ್ಲಿ ಪ್ರಯಾಣಿಸುವರ ಸಂಖ್ಯೆ ಹೆಚ್ಚಾಗುತ್ತಿದೆ. 50-60 ಜನ ಪ್ರಯಾಣಿಸಬೇಕಾದ ಬಸ್‌ಗಳಲ್ಲಿ 120-150 ಜನರು ಪ್ರಯಾಣಿಸುತ್ತಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರ ಒತ್ತಡ ತಡೆಯಲಾಗದ ಬಸ್ಸುಗಳ ಕಿಟಕು ಬಾಗಿಲುಗಳು ಕಿತ್ತುಬರುತ್ತಿವೆ. ಕುಳಿತುಕೊಳ್ಳಲು ಸೀಟು ಸಿಗದೆ ನಿಂತು ಪ್ರಯಾಣಿಸುವ ಜನರು ಆತಂಕದಿಂದಲೇ ಪ್ರಯಾಣಿಸುವಂತಾಗಿದೆ. ಮೈಸೂರಿಗೆ ಹೋಗುವ ಬಸ್‌ಗಳು ನೂರಾರು ಪ್ರಯಾಣಿಕರ ಭಾರ ತಾಳಲಾರದೆ ದಾರಿಯಲ್ಲಿಯೇ ಕೆಟ್ಟುನಿಲ್ಲುತ್ತಿವೆ.
ಕಾಲಕಾಲಕ್ಕೆ ಸರಿಯಾಗಿ ನಿರ್ವಹಣೆ ಇಲ್ಲವಾದ ಪರಿಣಾಮ ಡಿಪೋದಲ್ಲಿರುವ ಬಹುತೇಕ ವಾಹನಗಳು ಪ್ರತಿದಿನವೂ ಒಂದಲ್ಲ ಒಂದು ಕಡೆ ಕೆಟ್ಟು ನಿಲ್ಲುತ್ತಿವೆ. ನಿಲ್ದಾಣದಿಂದ ಹೊರಟ ಬಸ್‌ಎಲ್ಲಿ ನಿಲ್ಲುತ್ತದೆ ಎಂಬುದನ್ನೇ ಅರಿಯದ ಪ್ರಯಾಣಿಕರು ಆತಂಕದಿಂದಲೇ ಪ್ರಯಾಣಿಸುವಂತಾಗಿದೆ. ತಮ್ಮ ಕೆಲಸ ಕಾರ್ಯಗಳಿಗೆ ಸಕಾಲಕ್ಕೆ ಹೋಗಲಾಗದ ಪ್ರಯಾಣಿಕರು ಸಾರಿಗೆ ಸಂಸ್ಥೆ ಹಾಗೂ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಚಾಲಕರಿಂದ ಸಮಸ್ಯೆಯಾಗುತ್ತಿದ್ದು ಅವರಿಗೆ ಸೂಕ್ತ ತಿಳಿವಳಿಕೆ ನೀಡಲಾಗುತ್ತಿದೆ. ಮೈಸೂರು ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸಿದರೆ ಅಲ್ಲಿಗೆ ಹೆಚ್ಚಿನ ಬಸ್‌ಗಳನ್ನು ಕಳುಹಿಸಬೇಕಾಗುತ್ತದೆ. ಇದರಿಂದ ಒಮ್ಮೊಮ್ಮೆ ನಿಲ್ದಾಣದಲ್ಲಿ ಬಸ್‌ಗಳ ಕೊರತೆಯಾಗುತ್ತಿದ್ದು ಕೆಲವೇ ಸಮಯದಲ್ಲಿ ಅದನ್ನು ಸರಿಪಡಿಸಲಾಗುತ್ತಿದೆ. ಶಕ್ತಿ ಯೋಜನೆ ನಂತರ ಪ್ರಯಾಣಿಕರ ಒತ್ತಡ ಹಾಗೂ ಅನುಭವಿ ಸಿಬ್ಬಂದಿ ವರ್ಗಾವಣೆಯಿಂದಾಗಿ ಬಸ್‌ಗಳ ನಿರ್ವಹಣೆ ಕಷ್ಟವಾಗುತ್ತಿದ್ದು ಅದನ್ನು ಸರಿದೂಗಿಸಲಾಗುತ್ತಿದೆ. ಯಾವುದೇ ಪ್ರಯಾಣಿಕರು ದೂರು ನೀಡಿದರೂ ಲಭ್ಯ ಸಿಬ್ಬಂದಿಯನ್ನು ಬಳಕೆ ಮಾಡಿಕೊಂಡು ಕೂಡಲೇ ಅದನ್ನು ಸರಿಪಡಿಸಲಾಗುವುದು.
ಕೃಷ್ಣ ನಾಯಕ್ ಡಿಪೋ ಮ್ಯಾನೇಜರ್, ಗುಂಡ್ಲುಪೇಟೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net