ತೆರಕಣಾಂಬಿ ಲಕ್ಷ್ಮೀವರದರಾಜಸ್ವಾಮಿ ರಥೋತ್ಸವ ಸಂಪನ್ನ

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ಅವರ 17ನೇ ವರ್ಷದ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ಅವರ 17ನೇ ವರ್ಷದ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಾಘ ಮಾಸದ ಹುಣ್ಣಿಮೆ ಪ್ರಯುಕ್ತ ಜಾತ್ರೆ
  • ಭಕ್ತರಿಂದ ಗೋವಿಂದಾ-ಗೋಪಾಲ ನಾಮಸ್ಮರಣೆ
ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಶ್ರೀ ಲಕ್ಷ್ಮೀವರದರಾಜಸ್ವಾಮಿ ದೇವಸ್ಥಾನದ 17ನೇ ವರ್ಷದ ಬ್ರಹ್ಮ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಜಾತ್ರೆಯ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಗ್ರಾಮದ ಬೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಮೇಳೈಸಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಆಂಜನೇಯ, ವಾಲಿ ಸುಗ್ರೀವ ದೇವಸ್ಥಾನಗಳಿಗೂ ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಪ್ರತಿ ಮನೆಯ ಮಹಿಳೆಯರೂ ತಮ್ಮ ಮನೆಗಳ ಮುಂದೆ ವರ್ಣರಂಜಿತ ರಂಗೋಲಿಯನ್ನು ಬಿಡಿಸಿ ಸಂಭ್ರಮಿಸಿದರು.
ಪ್ರತಿವರ್ಷ ಮಾಘ ಮಾಸದ ಹುಣ್ಣಿಮೆಯಂದು ನಡೆಯುವ ರಥೋತ್ಸವಕ್ಕೆ ತಾಲೂಕು ಹಾಗೂ ನೆರೆಯ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಭಾನುವಾರ ಮಧ್ಯಾಹ್ನ 12 ಗಂಟೆಗೆೆ ಸರಿಯಾಗಿ ಮುಜರಾಯಿ ಅಧಿಕಾರಿಯೂ ಆದ ತಹಸೀಲ್ದಾರ್ ಎಂ.ಎಸ್.ತನ್ಮಯಿ ಅವರು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಗೋವಿಂದಾ-ಗೋಪಾಲ ನಾಮಸ್ಮರಣೆಯೊಂದಿಗೆ ಭಕ್ತರು ಜಯಘೋಷ ಮಾಡುತ್ತಾ ತೇರನ್ನೆಳೆದರು.
ದೇವಸ್ಥಾನದಿಂದ ಹೊರಟ ರಥವು ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿದ ನಂತರ ಬಂದ ಮಾರ್ಗದಲ್ಲಿಯೇ ದೇವಸ್ಥಾನಕ್ಕೆ ಹಿಂದುರುಗಿತು. ಪ್ರತಿ ವರ್ಷವೂ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೆ ರಥವನ್ನು ಎಳೆಯುವುದು ಇದರ ವಿಶೇಷ.
ಜಿಲ್ಲಾ ಸಂಪರ್ಕ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದ ಎಲ್ಲ ವಾಹನಗಳನ್ನೂ ಪೊಲೀಸರು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಮಾಡಿದ್ದರಿಂದ ಯಾವುದೇ ಅಡೆತಡೆಯಿಲ್ಲದೆ ರಥೋತ್ಸವ ಸುಗಮವಾಗಿ ನಡೆಯಿತು. ಮೆರವಣಿಗೆಯುದ್ದಕ್ಕೂ ಜಾನಪದ ಕಲಾತಂಡಗಳು, ಮಂಗಳವಾದ್ಯ, ಬ್ಯಾಂಡ್‌ವಾದನ, ಗೊರವರ ಕುಣಿತ, ಗಾರುಡಿ ಗೊಂಬೆ, ದೊಣ್ಣೆ ವರಸೆ, ಕೇರಳದ ಚಂಡೆಮದ್ದಲೆ ಮುಂತಾದ ತಂಡಗಳ ಜತೆ ಯುವಕರು ನರ್ತಿಸುತ್ತಾ ಸಾಗಿದರು. ಮುಖ್ಯ ರಸ್ತೆಯಲ್ಲಿ ಸಾಗಿದ ಮಾರ್ಗದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ವ್ಯಾಪಾರಸ್ಥರು ಭಕ್ತರಿಗೆ ನೀರು, ಪಾನಕ, ಮಜ್ಜಿಗೆ, ರೈಸ್‌ಬಾತ್, ಮೊಸರನ್ನ ವಿತರಿಸಿ ಭಕ್ತರ ದಾಹ ಮತ್ತು ಹಸಿವು ನೀಗಿಸಿದರು.
ಬಿಸಿಲಿನ ಬೇಗೆಯಿಂದ ರಸ್ತೆ ಕಾಯುವುದು ಹಾಗೂ ಧೂಳೇಳಿವುದನ್ನು ತಪ್ಪಿಸಲು ರಸ್ತೆಯಲ್ಲಿ ನೀರು ಹರಿಸಲಾಗಿತ್ತು. ಗ್ರಾಮದ ನಿವಾಸಿಗಳು ರಥಕ್ಕೆ ಪೂಜೆ ಸಲ್ಲಿಸಿ ತಮ್ಮ ಭಕ್ತಿಭಾವ ಮೆರೆದರೆ ನವ ದಂಪತಿ ಹಣ್ಣು ದವನ ಎಸೆದು ಪ್ರಾರ್ಥಿಸಿದರು.
ತೆರಕಣಾಂಬಿ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೆ.ಎಂ.ಮಹೇಶ್ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಆಯೋಜಿಸಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net