ಮುಖಂಡರ ಸೇರ್ಪಡೆ ಜೆಡಿಎಸ್ ಪಕ್ಷಕ್ಕೆ ಆನೆಬಲ

ಹನೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಶಾಸಕ ಎಂ.ಆರ್ ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು. ಗುರುಮಲ್ಲಪ್ಪ, ಉದ್ದನೂರು ಪ್ರಸಾದ್, ರಾಜುಗೌಡ, ಕೆ. ಚಿಕ್ಕಸ್ವಾಮಿ, ನಾಗೇಂದ್ರಬಾಬು ಇತರರಿದ್ದರು.
ಹನೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಶಾಸಕ ಎಂ.ಆರ್ ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು. ಗುರುಮಲ್ಲಪ್ಪ, ಉದ್ದನೂರು ಪ್ರಸಾದ್, ರಾಜುಗೌಡ, ಕೆ. ಚಿಕ್ಕಸ್ವಾಮಿ, ನಾಗೇಂದ್ರಬಾಬು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಅಭಿಮತ
  • ಪಕ್ಷ ಸೇರ್ಪಡೆ ಕಾರ್ಯಕ್ರಮ
ಹನೂರು: ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಭಾವಿ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ನನಗೆ ಆನೆ ಬಲ ಬಂದಂತಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಮುಖಂಡರನ್ನು ಆತ್ಮೀಯವಾಗಿ ಸ್ವಾಗತಿಸಿ ಮಾತನಾಡಿದರು.
ಕ್ಷೇತ್ರದ ಜನತೆ ನನ್ನನ್ನು ಶಾಸಕರಾಗಿ ಆಯ್ಕೆ ಮಾಡಿದ್ದು, ಇದರ ಫಲವಾಗಿ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇನೆ. ಜನತೆಯ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ನೀರಾವರಿ, ವಿದ್ಯುತ್, ರಸ್ತೆ, ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಸೌಕರ್ಯಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದ ಉಡುತೊರೆಹಳ್ಳ ಜಲಾಶಯದ ನೀರಾವರಿ ಯೋಜನೆಗೆ 490 ಕೋಟಿ ರೂ. ಅನುದಾನ ಘೋಷಿಸಿರುವುದು ರಾಮಾಪುರ ಹೋಬಳಿಯ ನೀರಾವರಿ ಸೌಕರ್ಯಕ್ಕೆ ವರದಾನವಾಗಿದೆ. ಈಗಾಗಲೇ ಕಾವೇರಿ ನದಿ ಮೂಲದಿಂದ ರಾಮನಗುಡ್ಡೆ ಕೆರೆ ಹಾಗೂ ಚಿಂಚಳ್ಳಿ ಹಳ್ಳಕ್ಕೂ ನೀರು ಹರಿಸಲಾಗುತ್ತಿದೆ. ಈ ತಿಂಗಳೊಳಗೆ ಹುಬ್ಬೆಹುಣಸೆ ಕೆರೆಗೂ ನೀರು ಹರಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು. ಒಟ್ಟಾರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ಇದನ್ನು ಮನಗಂಡು ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಭಾವಿ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತಸದ ವಿಷಯ. ನನ್ನ ರಾಜಕೀಯ ಜೀವನದಲ್ಲಿ ಸುದಿನವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಹುತ್ತೂರು ಕಾಂಗ್ರೆಸ್ ಮುಖಂಡ ಪುಟ್ಟವೀರನಾಯ್ಕ ಮಾತನಾಡಿ, ಶಾಸಕ ಎಂ.ಆರ್.ಮಂಜುನಾಥ್ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತಿದ್ದಾರೆ. ಬಡವರ ಬಗ್ಗೆ ಕಾಳಜಿಯನ್ನು ಹೊಂದಿದ್ದು, ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇವರ ಕಾರ್ಯವೈಖರಿಯನ್ನು ಮೆಚ್ಚಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಂಜುನಾಥ್ ಅವರ ಕೈ ಬಲಪಡಿಸಲಾಗುವುದು ಎಂದರು.
ಆಹಾರ ಇಲಾಖೆಯ ನಿವೃತ್ತ ಉಪ ನಿರ್ದೇಶಕ ರಾಚಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬಾಲರಾಜು, ಕೌದಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ನಿವೃತ್ತ ಸಹಾಯಕ ಅರಣ್ಯಾಧಿಕಾರಿ ಸಿದ್ದಪ್ಪಾಜಿ, ಚಂಗವಾಡಿ ರಾಚಪ್ಪ, ಕೌದಳ್ಳಿಯ ನಾಗ, ಮುನೀಂದ್ರ, ಶಾಗ್ಯದ ಕೆಂಚಪ್ಪ, ಹುತ್ತೂರಿನ ರಂಗಸ್ವಾಮಿ, ರುದ್ರಪ್ಪ, ಚಿನ್ನಸ್ವಾಮಿ, ಸದಾಶಿವಮೂರ್ತಿ ಇತರರು ಜೆಡಿಎಸ್‌ಗೆ ಸೇರ್ಪಡೆಯಾದರು.
ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಹಾಲಿ ನಿರ್ದೇಶಕ ಉದ್ದನೂರು ಪ್ರಸಾದ್, ಮಂಗಲ ಗ್ರಾಪಂ ಮಾಜಿ ಅಧ್ಯಕ್ಷ ಕೆ. ಚಿಕ್ಕಸ್ವಾಮಿ, ಮುಖಂಡರಾದ ರಾಜುಗೌಡ, ನಾಗೇಂದ್ರಬಾಬು, ರಾಜಶೇಖರಮೂರ್ತಿ, ಹುಚ್ಚಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net