ಎಚ್.ಡಿ ಕೋಟೆ, ಪಿರಿಯಪಟ್ಟಣ, ಚಾ.ನಗರ, ಗುಂಡ್ಲುಪೇಟೆ ಕೊಳ್ಳೇಗಾಲ ಹಾಗೂ ಇನ್ನಿತರ ವಿಧಾನಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಹನೂರು ಕ್ಷೇತ್ರ ಅರಣ್ಯ ಪ್ರದೇಶದೊಂದಿಗೆ ಜನವಸತಿ ಪ್ರದೇಶವಿದ್ದು, ವಿಭಿನ್ನವಾಗಿದೆ. ಕ್ಷೇತ್ರದಲ್ಲಿ ನೀರಿನದ್ದೇ ಒಂದು ಸಮಸ್ಯೆಯಾಗಿದ್ದು, ಸವಾಲಾಗಿ ಪರಿಣಮಿಸಿದೆ. ಮಾರ್ಟಳ್ಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ದೆಸೆಯಲ್ಲಿ ಕ್ರಮವಹಿಸಲಾಗಿದ್ದು, ಹಾಲೇರಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಈ ಭಾಗದ ಹಳ್ಳಗಳಿಗೆ ನೀರು ಹರಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಜತೆಗೆ ಮಳೆಗಾಲದ ವೇಳೆ ಇಲ್ಲಿನ ನೀರು ವ್ಯರ್ಥವಾಗಿ ತಮಿಳುನಾಡಿನ ಪಾಲಾರ್‌ಗೆ ಹರಿಯುವುದನ್ನು ತಡೆಗಟ್ಟಲು ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಇನ್ನು 291 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸುವ ಜೆಜೆಎಂ ಕಾಮಗಾರಿ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆಯ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.