ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಲು ಕ್ರಮ

ಮಾರ್ಟಳ್ಳಿ ಸಮೀಪದ ಅರಣ್ಯದಂಚಿನ ಹಾಲೇರಿ ಕೆರೆಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಭೇಟಿ ನೀಡಿ ನೀರಾವರಿ ಸೌಕರ್ಯ ಒದಗಿಸುವ ಸಂಬಂಧ ನಕಾಶೆ ವೀಕ್ಷಿಸಿದರು. ಮಹೇಶ್, ರಘುಪತಿ, ರಾಮಕೃಷ್ಣ, ಬಸವೇಶ್ ಇತರರಿದ್ದರು.
ಮಾರ್ಟಳ್ಳಿ ಸಮೀಪದ ಅರಣ್ಯದಂಚಿನ ಹಾಲೇರಿ ಕೆರೆಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಭೇಟಿ ನೀಡಿ ನೀರಾವರಿ ಸೌಕರ್ಯ ಒದಗಿಸುವ ಸಂಬಂಧ ನಕಾಶೆ ವೀಕ್ಷಿಸಿದರು. ಮಹೇಶ್, ರಘುಪತಿ, ರಾಮಕೃಷ್ಣ, ಬಸವೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಭರವಸೆ
  • ಹಾಲೇರಿ ಕೆರೆಗೆ ಭೇಟಿ ನೀಡಿ ಪರಿಶೀಲನೆ
ಹನೂರು: ಕ್ಷೇತ್ರದ ರೈತರಿಗೆ ಸಮರ್ಪಕ ನೀರಾವರಿ ಸೌಕರ್ಯ ಒದಗಿಸುವ ಸಲುವಾಗಿ ಈಗಾಗಲೇ ನೀಲಿ ನಕಾಶೆ ತಯಾರಿಸಲಾಗಿದ್ದು, ಇದರ ಅನುಷ್ಟಾನಕ್ಕೆ ಅಗತ್ಯ ಕ್ರಮವಹಿಸಲಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.  
ತಾಲೂಕಿನ ಮಾರ್ಟಳ್ಳಿ ಭಾಗಕ್ಕೆ ನೀರಾವರಿ ಸೌಕರ್ಯ ಒದಗಿಸುವ ಸಂಬಂಧ ಹಾಲೇರಿ ಕೆರೆ, ಕೀರೆಪಾತಿ ಡ್ಯಾಂ, ಪಾಲಾರ್ ಹಳ್ಳ ಹಾಗೂ ಈ ಭಾಗದ ಇನ್ನಿತರ ಜಲಮೂಲಗಳ ಪ್ರದೇಶಕ್ಕೆ ಶನಿವಾರ ಅಧಿಕಾರಿಗಳೊಂದಿಗೆ ತೆರಳಿ ಮಾಹಿತಿ ಪಡೆದು ಪರಿಶೀಲಿಸಿ ಮಾತನಾಡಿದರು. 
ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿತವಾಗಿದೆ. ಇದರಲ್ಲಿ ಮಾರ್ಟಳ್ಳಿ ಭಾಗದಲ್ಲಿ ಹೆಚ್ಚಾಗಿದೆ. ಹಾಗಾಗಿ ನದಿ ಮೂಲದಿಂದ ಈ ಭಾಗದ ಕೆರೆ ಹಾಗೂ ಹಳ್ಳಗಳ ಮೂಲಕ ನೀರು ಹರಿಸುವುದರ ಮೂಲಕ ಅಂತರ್ಜಲ ವೃದ್ಧಿಯ ಜತೆಗೆ ನೀರಾವರಿ ಸೌಕರ್ಯವನ್ನು ಒದಗಿಸಲು ಈಗಾಗಲೇ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಹಾಲೇರಿ ಕೆರೆ ಹಾಗೂ ಕೀರೆಪಾತಿಗೆ ನೀರು ತುಂಬಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ. ಮಳೆ ನೀರು ವ್ಯರ್ಥವಾಗದ ರೀತಿಯಲ್ಲಿ ಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ. ಉಡುತೊರೆಹಳ್ಳ ಜಲಾಶಯ ಹಾಗೂ ಇನ್ನಿತರೆ ಡ್ಯಾಂಗೆ ನೀರು ತುಂಬಿಸಲು ಸಿದ್ಧಪಡಿಸಲಾಗಿದ್ದ 350 ಕೋಟಿ ರೂ. ವೆಚ್ಚದ ಯೋಜನೆಯನ್ನು 490 ಕೋಟಿ ರೂ.ಗೆ ಹೆಚ್ಚಿಸಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಇನ್ನು ಅಜ್ಜೀಪುರ, ರಾಮಾಪುರ, ಕೌದಳ್ಳಿ ಮಾರ್ಗವಾಗಿ ಶೆಟ್ಟಳ್ಳಿ ಹಾಗೂ ಕುರಟ್ಟಿ ಹೊಸೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೂ ನೀರು ಒದಗಿಸಲು ವಿವಿಧ ಆಯಾಮಗಳಲ್ಲಿ ಪ್ರಯತ್ನ ನಡೆಯುತ್ತಿದೆ. ಒಟ್ಟಿನಲ್ಲಿ ಕ್ಷೇತ್ರದ ಜನರಿಗೆ ಸಮರ್ಪಕ ಕುಡಿಯುವ ನೀರು ಹಾಗೂ ರೈತರ ಕೃಷಿಗೆ ನೀರಾವರಿ ಸೌಕರ್ಯ ಒದಗಿಸುವುದೇ ನನ್ನ ಉದ್ದೇಶ. ಇದಕ್ಕೆ ಅಗತ್ಯ ಶ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು. 
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಮಹೇಶ್, ಇಇ ರಘುಪತಿ, ಎಇಇ ರಾಮಕೃಷ್ಣ, ಎಇಗಳಾದ ಬಸವೇಶ್, ಸತೀಶ್, ಸಣ್ಣ ನೀರಾವರಿ ಇಲಾಖೆಯ ಎಇಇ ಅಭಿಲಾಷ್, ಮುಖಂಡರಾದ ಜಪಮಾಲೆ, ಗೋವಿಂದ ಸಂಧ್ಯಾಗೊ, ಮಹದೇವ, ಚಂದ್ರು ಇನ್ನಿತರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net