ಕೊಳ್ಳೇಗಾಲ: ಪಟ್ಟಣದ ಭೀಮನಗರ ಬಡಾವಣೆಯಲ್ಲಿ ಶನಿವಾರ ತಾಲೂಕಿನ ಕುರುಬನಕಟ್ಟೆ ಶ್ರೀ ಕ್ಷೇತ್ರದ ಶ್ರೀ ಸಿದ್ದಪ್ಪಾಜಿ ಕಂಡಾಯಗಳ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ಭೀಮನಗರದ ಶ್ರೀ ಸಿದ್ದಪ್ಪಾಜಿ ನೀಲಗಾರರು ಮೆರವಣಿಗೆಗೂ ಮುನ್ನ ಶುಕ್ರವಾರ ಸಂಜೆ ಪಂಪ್ ಹೌಸ್‌ನಲ್ಲಿ ಕುರುಬನಕಟ್ಟೆ ಕಂಡಾಯಗಳು ಮತ್ತು ಭೀಮನಗರದ ಸಿದ್ದಪ್ಪಾಜಿ ಕಂಡಾಯಗಳಿಗೆ ಹೂ, ಹೊಂಬಾಳೆ ಧರಿಸಿ ವಿಶೇಷ ಪೂಜೆ ನೆರವೇರಿಸಿದರು. ಭೀಮನಗರದ ಹಿರಿಯ ಮುಖಂಡರು, ಡಾ.ಅಂಬೇಡ್ಕರ್ ಸ್ಮಾರಕ ಸಂಘದ ಪದಾಧಿಕಾರಿಗಳು, ನಗರಸಭಾ ಮಾಜಿ ಸದಸ್ಯರ ಉಪಸ್ಥಿತರಿದ್ದರು. ಬಳಿಕ ನೀಲಗಾರರು ಮಂಗಳಾರತಿ ನೆರವೇರಿಸಿದರು. ನಂತರ ಮಂಗಳವಾದ್ಯ, ನೀಲಗಾರರ ಜಾಗಟೆ ಶಬ್ದದಲ್ಲಿ ಕಂಡಾಯಗಳ ಮೆರವಣಿಗೆ ಡಾ.ರಾಜ್ ಕುಮಾರ್ ರಸ್ತೆ ಮೂಲಕ ಸಾಗಿಭೀಮನಗರ ಬಡಾವಣೆಯ ಪನ್ನಾಬೀದಿಯಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಸ್ಥಾನ ತಲುಪಿತು.
ಮೆರವಣಿಗೆಯುದ್ದಕ್ಕೂ ಸಾರ್ವಜನಿಕರು ಕಂಡಾಯಗಳಿಗೆ ಕೈಮುಗಿದು ಭಕ್ತಿ ಪ್ರದರ್ಶಿಸಿದರು. ಅಂತೆಯೇ, ಶನಿವಾರ ಭೀಮನಗರ, ಜಿ.ಪಿ.ಮಲ್ಲಪ್ಪಪುರಂ, ಸಿದ್ದಾರ್ಥ ನಗರ ಬಡಾವಣೆಯಲ್ಲಿ ಕುರುಬನಕಟ್ಟೆಯ ಕಂಡಾಯಗಳ ಮೆರವಣಿಗೆ ನೆರವೇರಿತು. ಮಧ್ಯಾಹ್ನ ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಮುಂಭಾಗದಲ್ಲಿ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.