ಆಕ್ಸಿಜನ್ ಸಂತ್ರಸ್ತರಿಗೆ ಉದ್ಯೋಗ ಜೀವನದ ದೊಡ್ಡ ಸಂತೋಷ

ಶಿವನಸಮುದ್ರದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರ ಜತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿದರು.
ಶಿವನಸಮುದ್ರದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರ ಜತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿದರು.
Published on
ಕೊಳ್ಳೇಗಾಲ: ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಕೊಟ್ಟಿರುವುದು ನನ್ನ ಜೀವನದಲ್ಲೇ ದೊಡ್ಡ ಸಂತೋಷದ ವಿಚಾರ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲೂಕಿನ ಶಿವನಸಮುದ್ರದ ರಂಗನಾಯಕಿ ಸಮೇತ ಜಗನ್ಮೋಹನ ರಂಗನಾಥಸ್ವಾಮಿ ದೇವಾಲಯ ಲೋಕಾರ್ಪಣೆ ಸಮಾರಂಭಕ್ಕೆ ಗುರುವಾರ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಆಕ್ಸಿಜನ್ ದುರಂತದಲ್ಲಿ ಮಡಿದ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಿರುವ ಸಂಗತಿ ಇತಿಹಾಸ ಪುಟ ಸೇರಿದೆ. ಕೋವಿಡ್ ಸಂದರ್ಭ ಆಕ್ಸಿಜನ್ ಸಿಗದೆ ಪರದಾಡಿ ಮೃತಪಟ್ಟವರ ಕುಟುಂಬಕ್ಕೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರ ನೇತೃತ್ವದಲ್ಲಿ ಉದ್ಯೋಗ ದೊರೆತಿದೆ. ದುರಂತದ ನಡೆದ ಸಮಯದಲ್ಲಿ ಸಂತ್ರಸ್ತ ಕುಟುಂಬಕ್ಕೆ ಉದ್ಯೋಗ ಭರವಸೆಯನ್ನು ನಮ್ಮ ಸರ್ಕಾರ ನೀಡಿತ್ತು. ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ನನ್ನ ಜೀವನದಲ್ಲಿ ಅತಿ ಸಂತೋಷವನ್ನು ಉಂಟು ಮಾಡಿದ ದಿನ ಯಾವುದೆಂದರೆ ಆಕ್ಸಿಜನ್ ದುರಂತದಲ್ಲಿ ಮಡಿದ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಿದ ದಿನವಾಗಿದೆ. ಈ ನೆಲದಲ್ಲಿ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ನಮ್ಮ ಅಧಿಕಾರವಧಿಯಲ್ಲಿ ಸಂತ್ರಸ್ತ ಕುಟುಂಬಕ್ಕೆ ಸರ್ಕಾರಿ ಉದ್ಯೋಗವನ್ನು ಕೊಟ್ಟಿದ್ದೇವೆ ಎಂದರು.
ರಾಜ್ಯದಲ್ಲಿ ಸರ್ಕಾರ ಕೂಡ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ಜಿಲ್ಲೆಗೆ ವಿಶೇಷವಾದ ಕೊಡುಗೆ ನೀಡಲಾಗಿದೆ. ಮುಖ್ಯವಾಗಿ ಜಿಲ್ಲೆಯ ಕೈಗಾರಿಕೋದ್ಯಮ ಉತ್ತೇಜನಕ್ಕೆ ಅಡಿಯಾಗಿದ್ದ ತೊಡಕನ್ನು ನಿವಾರಿಸಲಾಗಿದೆ. ಸರ್ಕಾರ 3 ವರ್ಷ ಪೂರೈಸಿದೆ. ಜನರಿಗೆ ಆರು ಗ್ಯಾರಂಟಿಯೊಂದಿಗೆ ಭೂ ಗ್ಯಾರಂಟಿ ಯೋಜನೆಯ ಭರವಸೆಯನ್ನು ಈಡೇರಿಸಿದ್ದೇವೆ. ಪ್ರತಿಯೊಬ್ಬರಿಗೂ ದಾಖಲೆ ಸೃಷ್ಟಿಸಿ ಮನೆ ಮನೆಗಳಿಗೆ ಖಾತೆ ವಿತರಿಸಲಾಗಿದೆ ಎಂದು ತಿಳಿಸಿದರು.
ಯಾರೂ ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಜನರ ಋಣವನ್ನು ತೀರಿಸುವ ಕೆಲಸವನ್ನು ಮಾಡುತ್ತಿದೆ. ಮುಂದಿನ 2 ವರ್ಷದಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಕಳೆದ 3 ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಯಿತು. ಈ ವರ್ಷ ಇನ್ನೂ ಮಳೆ ಬಿದ್ದಿಲ್ಲ. ರೈತರನ್ನು ಹೇಗೆ ಕಾಪಾಡಿಕೊಳ್ಳಬೇಕು, ಕುಡಿಯುವ ನೀರಿನ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ರೇಷ್ಮೆ, ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಕೆ.ವೆಂಕಟೇಶ್, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ಎಂ.ಆರ್.ಮಂಜುನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net