ಹನೂರು ಕ್ಷೇತ್ರಕ್ಕೆ ದಿ.ರಾಜುಗೌಡ ಕೊಡುಗೆ ಅಪಾರ

ಹನೂರಿನ ದೊಡ್ಡಿಂದುವಾಡಿ ಗ್ರಾಮದ ತೋಟದಲ್ಲಿ ದಿ.ರಾಜುಗೌಡ ಅವರ 22ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. ಆರ್.ನರೇಂದ್ರ, ಆಶಾ, ನವನೀತ್, ನಂಜುಂಡಸ್ವಾಮಿ, ಮಾದೇಶ್ ಇತರರು ಇದ್ದರು.
ಹನೂರಿನ ದೊಡ್ಡಿಂದುವಾಡಿ ಗ್ರಾಮದ ತೋಟದಲ್ಲಿ ದಿ.ರಾಜುಗೌಡ ಅವರ 22ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. ಆರ್.ನರೇಂದ್ರ, ಆಶಾ, ನವನೀತ್, ನಂಜುಂಡಸ್ವಾಮಿ, ಮಾದೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಆರ್.ನರೇಂದ್ರ ಅಭಿಪ್ರಾಯ
  • 22ನೇ ವರ್ಷದ ಪುಣ್ಯಸ್ಮರಣೆ
ಹನೂರು: ದಿವಂಗತ ರಾಜುಗೌಡ ಅವರು ತಮ್ಮ ರಾಜಕೀಯ ಜೀವನವನ್ನು ಬಡವರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದರು ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.
ಕೊಳ್ಳೇಗಾಲ ತಾಲೂಕಿನ ಸ್ವಗ್ರಾಮ ದೊಡ್ಡಿಂದುವಾಡಿ ಗ್ರಾಮದ ತೋಟದಲ್ಲಿ ಬುಧವಾರ ರಾಜುಗೌಡ ಅವರ 22ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಮಾಧಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ದಿ.ರಾಜುಗೌಡ ಅವರು ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು, ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದರು. ಶಾಸಕ ಹಾಗೂ ಸಚಿವರಾಗಿ ಉತ್ತಮ ಸೇವೆ ಸಲ್ಲಿಸುವುದರ ಮೂಲಕ ಜನಮನ್ನಣೆ ಗಳಿಸಿದ್ದರು. ಇವರ ಅಧಿಕಾರವಧಿಯಲ್ಲಿ ಕ್ಷೇತ್ರದ ನೀರಾವರಿಗೆ ಹೆಚ್ಚಿನ ಒತ್ತು ನೀಡಿದ್ದರು. ಇವರ ದೂರದೃಷ್ಟಿಯ ಫಲ ಗುಂಡಾಲ್ ಜಲಾಶಯ, ಹುಬ್ಬೆಹುಣಸೆ, ರಾಮನಗುಡ್ಡೆ ಕೆರೆ, ಉಡುತೊರೆ ಜಲಾಶಯ, ಕೌಳಿಹಳ್ಳ, ಹೂಗ್ಯಂ, ಗೋಪಿನಾಥಂ ಇನ್ನಿತರ ಕಡೆಗಳಲ್ಲಿ ಜಲಾಶಯಗಳು ನಿರ್ಮಾಣವಾಗಿದ್ದು, ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ತಂದೆ ರಾಜುಗೌಡ ಅವರ ಮಾರ್ಗದರ್ಶನದಲ್ಲಿ ನಾನು ಸಹ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ 3 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಅಧಿಕಾರವಿರಲಿ, ಇಲ್ಲದಿರಲಿ ಕ್ಷೇತ್ರದ ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತೇನೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬಾರದು. ನಿಮ್ಮ ಜತೆಗೆ ನಾವಿದ್ದೇನೆ ಎಂದು ತಿಳಿಸಿದರು.
ತಂದೆಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಆಹಾರ ಕಿಟ್ ವಿತರಣೆ ಸೇರಿದಂತೆ ಇತರ ಸಾಮಾಜಿಕ ಸೇವಾ ಕಾರ್ಯವನ್ನು ಕೈಗೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರ ಜತೆಗೆ ಚರ್ಚಿಸಿ ಸಮಾಜಮುಖಿ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ರಾಜುಗೌಡ ಅವರು ಮುತ್ಸದ್ದಿ ರಾಜಕಾರಣಿಯಾಗಿದ್ದು, ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರು ಅಗಲಿರಬಹುದು. ಆದರೆ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದ ಮನದಲ್ಲಿದ್ದು, ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಇದೇ ವೇಳೆ ಕುಟುಂಬಸ್ಥರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ರಾಜುಗೌಡ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ದಿ. ರಾಜುಗೌಡ ಅವರ ಪುತ್ರಿ ಅನಸೂಯಾ, ಅಳಿಯ ಹೊನ್ನೇಗೌಡ, ಸೊಸೆ ಆಶಾ ನರೇಂದ್ರ, ಮೊಮ್ಮಕ್ಕಳಾದ ನವನೀತ್, ಅಮಿತ್, ನಿಖಿತಾ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ಶಾಹುಲ್ ಆಹಮದ್, ಪಪಂ ಮಾಜಿ ಉಪಾಧ್ಯಕ್ಷರಾದ ಮಾದೇಶ್, ಗಿರೀಶ್, ಹರೀಶ್, ಸದಸ್ಯ ಮಹಾದೇಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಮಾದೇಶ್, ಜಿಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯ್ಕ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ತೋಟೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net