ಶೂಟೌಟ್ ವರದಿ ಬಂದ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆ

ಎಂ.ಆರ್.ಮಂಜುನಾಥ್
ಎಂ.ಆರ್.ಮಂಜುನಾಥ್
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಪ್ರತಿಕ್ರಿಯೆ
  • ಪದೇ ಪದೆ ಧ್ವಂಸ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ?
  • ಯಾವುದೇ ಕಾರಣಕ್ಕೂ ಒಪ್ಪುವ ಪ್ರಶ್ನೆಯೇ ಇಲ್ಲ

ಹನೂರು:

ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್ ಪ್ರಕರಣ ಸಂಬಂಧ ವರದಿ ಬಂದ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಬರಹಳ್ಳ ಸೇತುವೆ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶೂಟೌಟ್ ಪ್ರಕರಣದ ಸಂಪೂರ್ಣ ವರದಿ ಸೋಮವಾರ ಸಿಗಲಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಶೂಟೌಟ್ ಘಟನೆ ನಡೆಯಬಾರದಿತ್ತು, ನಡೆದಿದೆ. ಮೂವರು ಮೃತಪಟ್ಟ ಹಿನ್ನೆಲೆ ನಡೆದ ಪ್ರತಿಭಟನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಆಕ್ರೋಶದಿಂದ ಕೆಲವರು ಅರಣ್ಯ ಇಲಾಖೆ ವಸತಿಗೃಹ ಹಾಗೂ ಕಳ್ಳಬೇಟೆ ತಡೆ ಶಿಬಿರಗಳನ್ನು ಧ್ವಂಸಗೊಳಿಸಿದ್ದರು. ಮತ್ತೆ ಈ ಕಾರ್ಯವೆಸಗಿರುವುದು ಎಷ್ಟರ ಮಟ್ಟಿಗೆ ಸರಿ? ಯಾವುದೇ ಕಾರಣಕ್ಕೂ ಒಪ್ಪುವ ಪ್ರಶ್ನೆಯೇ ಇಲ್ಲ. ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯಾಗಲಿದೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡಿರುವ ಸಂಬಂಧ ಪರಿಸರ ವಾದಿಗಳು ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಮೃತರ ಕುಟುಂಬ ಹಾಗೂ ಮಕ್ಕಳ ಹಿತದೃಷ್ಟಿಯನ್ನು ಮನಗಂಡು ಮಾನವೀಯತೆಯಿಂದ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣದಿಂದ ಕೂಡಿರುವ ಹನೂರು ಭಾಗದಲ್ಲಿ ಜನರನ್ನು ಅರಣ್ಯದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ವನ್ಯಜೀವಿಗಳು ಉಳಿಯಬೇಕು. ಜನರು ಬದುಕು ನಡೆಸಬೇಕು. ಹಾಗಾಗಿ ಜತೆಯಲ್ಲಿಯೇ ಸಾಗಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನರು ಪರಸ್ಪರ ವಿಶ್ವಾಸದಿಂದ ಇರಬೇಕು. ದ್ವೇಷ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net