ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿ

ಚಾಮರಾಜನಗರ ತಾಲೂಕಿನ ಮೂಕನಪಾಳ್ಯ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಸೇವಾಲಾಲ್ ಚಿಂತನ-ಮಂಥನ ಕಾರ್ಯಕ್ರಮವನ್ನು ಶ್ರೀ ರೂಪಾ ಉದ್ಘಾಟಿಸಿದರು. ಡಾ.ಮಹದೇವಿ ಭಾಯಿ, ಜಿ. ಪಳನಿಸ್ವಾಮಿ ಜಾಗೇರಿ, ಎನ್.ರಾಜು, ಪಿ.ಕುಮಾರ್ ನಾಯಕ್, ಡಾ.ಗೋವಿಂದಸ್ವಾಮಿ, ಯೋಗೇಶ ನಾಯಕ್ ಇತರರಿದ್ದರು.
ಚಾಮರಾಜನಗರ ತಾಲೂಕಿನ ಮೂಕನಪಾಳ್ಯ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಸೇವಾಲಾಲ್ ಚಿಂತನ-ಮಂಥನ ಕಾರ್ಯಕ್ರಮವನ್ನು ಶ್ರೀ ರೂಪಾ ಉದ್ಘಾಟಿಸಿದರು. ಡಾ.ಮಹದೇವಿ ಭಾಯಿ, ಜಿ. ಪಳನಿಸ್ವಾಮಿ ಜಾಗೇರಿ, ಎನ್.ರಾಜು, ಪಿ.ಕುಮಾರ್ ನಾಯಕ್, ಡಾ.ಗೋವಿಂದಸ್ವಾಮಿ, ಯೋಗೇಶ ನಾಯಕ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • higher education for girls
ಚಾಮರಾಜನಗರ: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಲು ಬಂಜಾರ ಸಮುದಾಯದವರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಸಲಹೆ ನೀಡಿದರು.
ತಾಲೂಕಿನ ಮೂಕನಪಾಳ್ಯ ಗ್ರಾಮದ ಲಕ್ಷ್ಮೀದೇವಿ ಬಂಜಾರ ರಂಗಮಂದಿರದಲ್ಲಿ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಸಂತ ಶ್ರೀ ಸೇವಾಲಾಲ್ ತತ್ವ ಆದರ್ಶಗಳ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂತ ಸೇವಾಲಾಲ್ ಅವರು ಆಧ್ಯಾತ್ಮಿಕತೆಯ ಮೂಲಕ ಸಮಾಜ, ಸಮುದಾಯದ ಉನ್ನತಿಗೆ ಬೆಳಕು ಚೆಲ್ಲಿದ ಪವಾಡ ಪುರುಷರಾಗಿದ್ದಾರೆ. ಮನುಷ್ಯ ಜನ್ಮ ಸಾರ್ಥಕತೆಗೆ ಸಂತ ಸೇವಾಲಾಲರ ಆದರ್ಶ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಪಾನಮುಕ್ತ ಸಮಾಜ ನಿರ್ಮಾಣ, ಮಹಿಳೆಯರಿಗೆ ಸಮಾನತೆ ತತ್ವಗಳನ್ನು ಇಡೀ ಮಾನವ ಕುಲಕ್ಕೆ ಮನದಟ್ಟು ಮಾಡಿಕೊಟ್ಟ ಸಂತ ಸೇವಾಲಾಲರು ಮಾದರಿಯಾಗಿದ್ದಾರೆ ಎಂದರು.
ಸಮುದಾಯದ ಸಾಂಪ್ರಾದಾಯಿಕ ಕಲೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಬಂಜಾರ ಸಂಸ್ಕೃತಿ ಉಳಿವಿಗೆ ಮುಂದಾಗಬೇಕು. ನಶಿಸುತ್ತಿರುವ ಕಸೂತಿ ಕಲೆಗಳ ಪುನಶ್ಚೇತನಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಮೈಸೂರು ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಡಾ.ಮಹದೇವಿ ಭಾಯಿ ಮಾತನಾಡಿ, ಬಂಜಾರ ಸಮುದಾಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಮೆಟ್ಟಿನಿಂತು ಹೆಣ್ಣು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ನೀಡಬೇಕು. ಮಹಿಳೆಯರು ಸ್ವಾವಲಂಬಿಗಳಾದರೆ ಸಮಾಜ ಉನ್ನತಿಯತ್ತ್ತ ಸಾಗುತ್ತದೆ ಎಂದರು.
ಸಾಹಿತಿ ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿಯ ಸದಸ್ಯ ಜಿ. ಪಳನಿಸ್ವಾಮಿ ಜಾಗೇರಿ ಮಾತನಾಡಿ, ಬಂಜಾರ ಸಮುದಾಯದ ಸಂಸ್ಕೃತಿ ಹಾಗೂ ಭಾಷೆಯ ಉಳಿವಿಗಾಗಿ ಸರ್ಕಾರವು ಅಕಾಡೆಮಿ ಸ್ಥಾಪಿಸಿ ಪ್ರೋತ್ಸಾಹಿಸುತ್ತಿದೆ. ರಾಜ್ಯದ ಉದ್ದಗಲಕ್ಕೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮುದಾಯದ ಜಾಗೃತಿಗಾಗಿ ಅಕಾಡೆಮಿ ಕಾರ್ಯಪ್ರವೃತ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎನ್.ರಾಜು, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಕುಮಾರ್ ನಾಯಕ್, ಸಂಶೋಧಕ ಡಾ.ಗೋವಿಂದಸ್ವಾಮಿ, ಯುವ ಚಿಂತಕ ಯೋಗೇಶ ನಾಯಕ್, ಹವ್ಯಾಸಿ ಬಳಗದ ಮೇಗ್ಯ ನಾಯಕ್, ಪಿ.ಎ.ಸಿ.ಸಿ. ಸಹಕಾರ ಬ್ಯಾಂಕ್ ನಿರ್ದೇಶಕ ಪಿ. ಗಣೇಶ್ ನಾಯಕ್, ಬಾಲಾಜಿ ನಾಯಕ್, ಗೋರ್ ಸಂಚಾಲಕ ಶಂಕರ್ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net