ಹನೂರು: ಸುಳವಾಡಿ ವಿಷ ಸೇವನೆ ದುರಂತ ಪ್ರಕರಣದ ಎಂ.ಜಿ ದೊಡ್ಡಿ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಸಂಬಂಧ ಮಂಗಳವಾರ ತಹಸೀಲ್ದಾರ್ ಕೆ.ಎನ್ ಚೈತ್ರಾ ಅಧ್ಯಕ್ಷತೆಯಲ್ಲಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಸಭೆ ನಡೆಯಿತು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿ, ಸುಳವಾಡಿ ವಿಷ ಪ್ರಸಾದ ಸೇವನೆ ದುರಂತ ಪ್ರಕರಣದಲ್ಲಿ ಸಂತ್ರಸ್ತರಿಗೆ ನಿವೇಶನ ಹಾಗೂ ಜಮೀನು ನೀಡುವಂತೆ ಸರ್ಕಾರ ಸೂಚಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸಹ ಆದೇಶಿಸಿದ್ದಾರೆ. ಎಂ.ಜಿ ದೊಡ್ಡಿ ಸಂತ್ರಸ್ತರಿಗೆ ಸಮೀಪದ ಜ್ಯೋತಿಪುರದಲ್ಲಿ ಸರ್ವೇ ನಂಬರ್ 934/1 ರಲ್ಲಿ 4 ಎಕರೆ ಜಾಗವನ್ನು ಹಂಚಿಕೆ ಮಾಡಲಾಗಿದೆ. ಆದರೆ, ಹಲವು ವರ್ಷಗಳು ಕಳೆದರೂ ನಿವೇಶನ ಹಂಚಿಕೆ ಮಾಡಿಲ್ಲ.ಈ ಬಗ್ಗೆ ಅಗತ್ಯ ಕ್ರಮವಹಿಸಿ ಜಿಲ್ಲಾಧಿಕಾರಿ ಅವರ ಆದೇಶದಂತೆ ನಿವೇಶನ ಹಂಚಿಕೆ ಮಾಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ರಾಮಲಿಂಗಂ ಮಾತನಾಡಿ, ಮಾರ್ಟಳ್ಳಿ ಭಾಗದ ಸಂತ್ರಸ್ತರಿಗೆ ಬಿದರಹಳ್ಳಿಯಲ್ಲಿ ಜಾಗವನ್ನು ಗುರುತಿಸಲಾಗಿದೆ. ಫಲಾನುಭವಿಗಳನ್ನು ಸಹ ಆಯ್ಕೆ ಮಾಡಲಾಗಿದೆ. ಆದರೆ ಈವರೆಗೂ ಹಕ್ಕು ಪತ್ರ ನೀಡಿಲ್ಲ. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಮನವಿ ಮಾಡಿದರು.
ತಹಸೀಲ್ದಾರ್ ಕೆ.ಎನ್ ಚೈತ್ರಾ ಮಾತನಾಡಿ, ಎಂ.ಜಿ ದೊಡ್ಡಿ ಸಂತ್ರಸ್ತರಿಗೆ ಜ್ಯೋತಿಪುರದಲ್ಲಿ ನಿವೇಶನ ಗುರುತಿಸಿ ತಾಲೂಕು ಪಂಚಾಯಿತಿಗೆ ನೀಡಲಾಗಿದೆ. ಈ ಸಂಬಂಧ ನಡೆದ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಅವರ ಗಮನಕ್ಕೂ ತರಲಾಗಿದೆ. ಆದರೆ, ತಾಪಂನಿಂದ ಯಾವುದೇ ಪತ್ರ ವ್ಯವಹಾರವಾಗಿಲ್ಲ. ಈ ಜಾಗದಲ್ಲಿ ಆಶ್ರಯ ಯೋಜನೆಯಡಿ ಇತರರಿಗೂ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಈ ಬಗ್ಗೆ ನಿಯಮಾನುಸಾರ ಅಗತ್ಯ ಕ್ರಮವಹಿಸುವಂತೆ ತಾಪಂ ಇಒಗೆ ಸೂಚಿಸಿದರು.
ಈ ಜಾಗದ ಬದಲು ಕಂದಾಯ ಇಲಾಖೆಯಿಂದ ಬೇರೆಡೆ ಜಾಗದಲ್ಲಿ ನಿವೇಶನ ನೀಡಲು ಸಿದ್ಧರಿದ್ದೇವೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಬಿದರಹಳ್ಳಿ ಸರ್ವೇ ನಂಬರ್ 42ರಲ್ಲಿ ಹದ್ದುಬಸ್ತು ಮಾಡಿ ತಾಪಂಗೆ ಹಸ್ತಾಂತರಿಸಲಾಗಿದ್ದು, ಇಲ್ಲಿಂದಲೇ ಸಂತ್ರಸ್ತರಿಗೆ ನಿವೇಶನದ ಹಕ್ಕು ಪತ್ರ ವಿತರಣೆಯಾಗಬೇಕಿದೆ ಎಂದು ತಿಳಿಸಿದರು. ಆರ್ಐ ಶಿವಕುಮಾರ್, ಗ್ರಾಮ ಅಡಳಿತ ಅಧಿಕಾರಿ ಕಾರ್ತಿಕ್, ಪಿಡಿಒ ಆಕಾಶ್, ದಸಂಸ ಜಿಲ್ಲಾ ಸಂಚಾಲಕ ಹಿಂಡಯ್ಯ, ತಾಲೂಕು ಸಂಚಾಲಕರಾದ ಮಾದೇಶ್, ಮುರುಗೇಶ್, ಷಣ್ಮುಗಂ ಇನ್ನಿತರರಿದ್ದರು