ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯಲ್ಲಿ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ಅವರಿಗೆ ಮನವಿ ಸಲ್ಲಿಸಿದರು.
Published on:
Copied
Follow Us
ಗುಂಡ್ಲುಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 5 ದಿನಗಳಿಂದ ಹಗಲಿರುಳು ಧರಣಿ ನಡೆಸುತ್ತಿರುವ ಅರಣ್ಯ ಇಲಾಖೆ ಹಂಗಾಮಿ ನೌಕರರು ಮಂಗಳವಾರ ಸಫಾರಿ ಕೌಂಟರ್‌ನಿಂದ ಹುಲಿ ಯೋಜನೆ ನಿರ್ದೇಶಕರ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಂಡೀಪುರ ಹುಲಿ ಯೋಜನೆಯ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಮುಂದೆ ಹೊರಗುತ್ತಿಗೆ ನೌಕರರು ಅರಣ್ಯ ಸಚಿವರು ಸ್ಥಳಕ್ಕಾಗಮಿಸಿ ತಮ್ಮ ಮನವಿ ಆಲಿಸಬೇಕು. ಜತೆಗೆ ಹಿರಿಯ ಅಧಿಕಾರಿಗಳು ಬರಬೇಕು ಎಂಬ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮಂಗಳವಾರ ಪ್ರತಿಭಟನಾ ಜಾಥಾ ನಡೆಸಿದರು.
ಸಂಘಟನೆ ಅಧ್ಯಕ್ಷ ಎ.ಎಂ.ನಾಗರಾಜು ಮಾತನಾಡಿ, ದಿನಗೂಲಿ ನೌಕರರ ಸೇವೆ ಕಾಯಂ ಮಾಡಬೇಕು. ಇಪಿಎಫ್ ಸೌಲಭ್ಯ ನೀಡಬೇಕು. ತಿಂಗಳಲ್ಲಿ 26 ರ ಬದಲು 30 ದಿನಗಳ ಸಂಬಳ ನೀಡಬೇಕು. ವಾಹನ ಚಾಲಕರಾಗಿ ಕೆಲಸ ನಿರ್ವಹಿಸುವರಿಗೆ ಕಷ್ಟ ಪರಿಹಾರ ಭತ್ಯೆ ನೀಡಬೇಕು. ವಿಮಾ ಹಣ ದುರುಪಯೋಗ ಆಗಿರುವ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂಬುದು ಸೇರಿ ನಾವು ನ್ಯಾಯಯುತವಾದ ಬೇಡಿಕೆ ಮುಂದಿಟ್ಟು ಧರಣಿ ನಡೆಸುತ್ತಿದ್ದೇವೆ. ಆದರೂ ಅರಣ್ಯ ಸಚಿವರು ಮತ್ತು ಇಲಾಖೆ ಮೇಲಧಿಕಾರಿಗಳು ಬಂದು ನಮ್ಮ ಸಮಸ್ಯೆ ಕೇಳಿಲ್ಲ. ಹೀಗಾಗಿ ಪ್ರತಿಭಟನಾ ಜಾಥಾದ ಮೂಲಕ ಈಗ ಮನವಿ ಸಲ್ಲಿಸಲಾಗಿದೆ. ಮುಂದೆ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಹುಲಿ ಯೋಜನೆ ನಿರ್ದೇಶಕ ಎಸ್.ಪ್ರಭಾಕರನ್ ಅವರಿಗೆ ಮನವಿ ಸಲ್ಲಿಸಿದರು. ಧರಣಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಎಸ್.ಹರೀಶ್, ದಾಂಡೆಲಿ, ಮಡಿಕೇರಿ, ಚಾಮರಾಜನಗರ, ನಾಗರಹೊಳೆ, ಮಹದೇಶ್ವರ ಬೆಟ್ಟ, ಭದ್ರ ಮತ್ತು ವಿವಿಧ ವನ್ಯಜೀವಿ ವಿಭಾಗದ ಹಂಗಾಮಿ ನೌಕರರು ಪಾಲ್ಗೊಂಡಿದ್ದರು.