ಜು.24 ರಂದು ಉಪವಿಭಾಗಧಿಕಾರಿ ಕಚೇರಿ ಎದುರು ಪ್ರತಿಭಟನೆ

ರೈತ ಮುಖಂಡ ಶೈಲೇಂದ್ರ
ರೈತ ಮುಖಂಡ ಶೈಲೇಂದ್ರ
Published on
ಕೊಳ್ಳೇಗಾಲ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜು.24 ರಂದು ಉಪವಿಭಾಗಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಶೈಲೇಂದ್ರ ಹೇಳಿದರು.
ಮಳೆ ಅಭಾವದಿಂದ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವಾಗಿ ಘೋಷಣೆ ಮಾಡಬೇಕೆಂದು ಸರ್ಕಾರಕ್ಕೆ ರೈತರು ಒತ್ತಾಯಿಸಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಅಂತರ್ಜಲ ಅಭಿವೃದ್ಧಿಗೆ ಹಾಗೂ ಜನ ಜಾನುವಾರುಗಳಿಗೆ ಕಬಿನಿ ಕಾಲುವೆಯ ಮೂಲಕ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕೆಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು.
ವಿಷ ಪೂರಿತ ಹಾವು ಕಡಿತದಿಂದ ಮೃತಪಟ್ಟರೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂ.ಪರಿಹಾರ ನೀಡಬೇಕು. ಜಕ್ಕಳಿಯ ಕೋಟೆ ಕೆರೆ, ಹಳೆಯ ಹಂಪಾಪುರ ಕೆರೆಗೆ ನದಿ ಮೂಲದಿಂದ ನೀರು ತುಂಬಿಸಬೇಕು. ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಹಾಗಾಗಿ ಸತ್ತೇಗಾಲ ಮತ್ತು ದಾಸನಪುರ ವ್ಯಾಪ್ತಿಯಲ್ಲಿ ಬರುವ ಬೈಪಾಸ್ ರಸ್ತೆಯಲ್ಲಿ ಮೇಲ್ಸೆತುವೆ ನಿರ್ಮಿಸಬೇಕು.
ದೊಡ್ಡಿಂದುವಾಡಿ ಕೆಶಿಪ್ ರಸ್ತೆ ವ್ಯಾಪ್ತಿಯಲ್ಲಿ ಮೇಲ್ಸೆತುವೆ ನಿರ್ಮಾಣವಾಗಬೇಕು. ಕೊಳ್ಳೇಗಾಲ ಹಾಗೂ ಹನೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಆದರೂ ಕಾಮಗಾರಿ ಆರಂಭಗೊಂಡಿಲ್ಲ. ಪ್ರಚಾರಕ್ಕೆ ಮಾತ್ರ ಕ್ಷೇತ್ರದ ಶಾಸಕರು ಭೂಮಿಪೂಜೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
1997-98ರಲ್ಲಿ ಪಣಕೋಬೆ ಅರಣ್ಯ ಪ್ರದೇಶದಲ್ಲಿ ಜಲಾಶಯ ನಿರ್ಮಾಣಕ್ಕೆ ಅಂದಿನ ಹಣಕಾಸು ಸಚಿವ ಸಿದ್ದರಾಮಯ್ಯ, ಸಚಿವ ಎಚ್.ನಾಗಪ್ಪ ಅವರು ಭೂಮಿಪೂಜೆ ಸಲ್ಲಿಸಿದರು. ಆದರೆ, ಕಾಮಗಾರಿ ಆರಂಭವಾಗಲಿಲ್ಲ. ಆದ್ದರಿಂದ ಜಲಾಶಯ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಲೋಕಾಯುಕ್ತ ಪ್ರಕರಣಗಳಿಂದ ರೈತ ಸಮುದಾಯಕ್ಕೆ ಸಮಸ್ಯೆ ಆಗುತ್ತಿದೆ.
ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ರೈತರ ಜಮೀನುಗಳಲ್ಲಿ ತಿರುಗಾಡುವ ದಾರಿ ಸಮಸ್ಯೆ ಉಂಟಾಗಿದ್ದು ತ್ವರಿತವಾಗಿ ಬಗೆಹರಿಸಬೇಕು. ತೇಗ ಸೇರಿದಂತೆ ಇನ್ನಿತರ ಮರಗಳನ್ನು ಕಟಾವು ಮಾಡಲು ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡ ಬೇಕು. ಜಾಗೇರಿಯಲ್ಲಿರುವ ರೈತರ ಜಮೀನಿಗಳಿಗೆ ಸಾಗುವಳಿ ಚೀಟಿ ನೀಡಬೇಕು. ಮೇಲಿನ ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಪೆರಿಯನಾಯಗಂ, ಅರ್ಪದಂ, ಚಾರ್ಲಿಸ್, ವಸಂತ್ ಕುಮಾರ್, ಲಾರೆನ್ಸ್, ಚಂದ್ರಶೇಖರ್, ಮುರುಗನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net