ನಾಲ್ಕನೇ ಹಂತದ ಕೆರೆ ತುಂಬಿಸುವಂತೆ ಒತ್ತಾಯಿಸಿ ಆ.18ರಿಂದ ತಾಲೂಕು ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಹೇಳಿದರು.
ಈ ಭಾಗದಲ್ಲಿ ಅಂತರ್ಜಲ ಕುಸಿತವಾಗಿ ಕೊಳವೆ ಬಾವಿಗಳು ಬರಿದಾಗಿರುವುದರಿಂದ ಜಮೀನುಗಳಲ್ಲಿ ಬೆಳೆಸಿದ್ದ ಬೆಳೆಗಳು ಒಣಗಿ ನಿಂತಿವೆ. ಲಕ್ಷಾಂತರ ರೂ.ಸಾಲ ಮಾಡಿ ಬೆಳೆ ಹಾಕಿದ್ದೇವೆ. ನಾಲ್ಕನೇ ಹಂತದ ಬದಲು ಮೂರನೇ ಹಂತಕ್ಕೆ ನೀರು ಬಿಟ್ಟಿರುವುದನ್ನು ಖಂಡಿಸಿ ಆ.18ರಿಂದ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡುವ ತನಕ ಹೋರಾಟ ಮಾಡುತ್ತೇವೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟದ ಅಧ್ಯಕ್ಷ ಕೊಡಸೋಗೆ ಶಿವಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತರು, ಜನಪ್ರತಿನಿಧಿಗಳನ್ನು ಕೇಳದೆ ಜಿಲ್ಲಾಧಿಕಾರಿ ಏಕಾಏಕಿ ಚಾಮರಾಜನಗರ ಭಾಗದ ಕೆರೆಗಳಿಗೆ ನೀರು ತಿರುಗಿಸಿದ್ದು ತಪ್ಪು. ಹೀಗಾಗಿ ಪಕ್ಷಾತೀತವಾಗಿ ಎಲ್ಲ ರೈತರು, ಕನ್ನಡಪರ, ಪ್ರಗತಿಪರ ಸಂಘಟನೆಗಳು ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದರು.
ನೀರಿನ ವಿಷಯದಲ್ಲಿ ರಾಜಕೀಯ ಮಾಡಿ, ಜನರ ಭವಿಷ್ಯದ ಜತೆ ಚೆಲ್ಲಾಟ ಆಡಲಾಗುತ್ತಿದೆ. ಕೆಲವರನ್ನು ಎತ್ತಿ ಕಟ್ಟಿ ನೀರು ಬಿಡಿಸಿಕೊಳ್ಳುತ್ತಾರೆ. ಜವಾಬ್ದಾರಿ ಇರುವ ಶಾಸಕರು ಈ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕಲ್ಲವೇ ಎಂದು ಪ್ರಶ್ನಿಸಿದರು.
ಶಾಸಕರಾಗಿ ನಾಲ್ಕು ವರ್ಷವಾಗುತ್ತಿದ್ದರೂ ಕೆರೆಗಳನ್ನು ತುಂಬಿಸಲಾಗಿಲ್ಲ. ಆದ್ದರಿಂದ ಪ್ರತಿಭಟನಾ ಸ್ಥಳಕ್ಕೆ ಉಸ್ತುವಾರಿ ಸಚಿವರು, ಶಾಸಕರು ಆಗಮಿಸಿ ಕೆರೆಗಳನ್ನು ತುಂಬಿಸುವ ಭರವಸೆ ನೀಡಬೇಕು. ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ನೀರು ಬಿಡಲು ಮೋಟಾರ್ ದುರಸ್ತಿ ಕಾರಣ ನೀಡಲಾಗುತ್ತಿತ್ತು. ದುರಸ್ತಿ ಆದ ನಂತರ ಚಾಮರಾಜನಗರ ಭಾಗಕ್ಕೆ ನೀರು ಬಿಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.