ಅಂಬೇಡ್ಕರ್ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ

ಹನೂರಿನಲ್ಲಿ ಒಳ ಮೀಸಲಾತಿ ಅನ್ಯಾಯವನ್ನು ಖಂಡಿಸಿ ಬಲಗೈ ಸಮುದಾಯಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಿತು.
ಹನೂರಿನಲ್ಲಿ ಒಳ ಮೀಸಲಾತಿ ಅನ್ಯಾಯವನ್ನು ಖಂಡಿಸಿ ಬಲಗೈ ಸಮುದಾಯಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಒಳಮೀಸಲಾತಿಯಲ್ಲಿನ ಅನ್ಯಾಯ ಖಂಡನೆ
  • ನ್ಯಾ.ನಾಗಮೋಹನ್ ದಾಸ್ ವರದಿಗೆ ವಿರೋಧ
ಹನೂರು: ಒಳಮೀಸಲಾತಿಯಲ್ಲಿನ ಅನ್ಯಾಯವನ್ನು ಖಂಡಿಸಿ ಸೋಮವಾರ ಗಡಿಕಟ್ಟೆ ಯಜಮಾನರು, ತಾಲೂಕು ಡಾ.ಬಿ.ಆರ್. ಅಂಬೇಡ್ಕರ್ ಸಂಘಗಳ ಒಕ್ಕೂಟ ಹಾಗೂ ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಮಹಿಳೆಯರು ಸೇರಿದಂತೆ ಹನೂರು ಹಾಗೂ ಕೊಳ್ಳೇಗಾಲ ತಾಲೂಕಿನಿಂದ ಆಗಮಿಸಿದ್ದ ಬಲಗೈ ಸಮುದಾಯದ ಸಾವಿರಾರು ಜನರು ಅಂಬೇಡ್ಕರ್ ಭಾವಚಿತ್ರ ಹಾಗೂ ನಾಮಫಲಕವನ್ನು ಹಿಡಿದು ಒಳ ಮೀಸಲಾತಿಯಲ್ಲಿನ ಅನ್ಯಾಯ ಹಾಗೂ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಕಾರರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಸರ್ಕಾರದ ನಡೆಯನ್ನು ಖಂಡಿಸಿದರು. ಬಳಿಕ ತಹಸೀಲ್ದಾರ್ ಕಚೇರಿ ಮುಂಭಾಗ ಜಮಾಯಿಸಿದರು. ನಾಗಮೋಹನ್ ದಾಸ್ ವರದಿಯ ಒಳ ಮೀಸಲಾತಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನರಿದ್ದು, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಡಿಯಲ್ಲಿ ನೀಡಿದ ಮೀಸಲಾತಿಯಿಂದ ಶಿಕ್ಷಣ ಹಾಗೂ ಉದ್ಯೋಗವನ್ನು ಪಡೆದುಕೊಳ್ಳುತ್ತಿದ್ದೇವೆ. ಆದರೆ ಇದನ್ನು ಸಹಿಸದ ಕೋಮುವಾದಿಗಳು ಬಲಗೈ ಸಮುದಾಯವನ್ನು ಮೀಸಲಾತಿಯಿಂದ ಹೊರಗಿಡಲು ಹುನ್ನಾರ ನಡೆಸುತ್ತಿದೆ. 2005 ರಿಂದ 12ರ ತನಕ ಸದಾಶಿವ ಆಯೋಗವು ಸಮುದಾಯದ ಬಗ್ಗೆ ಸಮೀಕ್ಷೆ ನಡೆಸಿದೆ. ಜತೆಗೆ ಮಾದುಸ್ವಾಮಿ ಆಯೋಗವು ಇದೇ ಕಾರ್ಯವನ್ನು ಮಾಡಿದೆ. ಆದರೆ ಸಿಎಂ ಸಿದ್ದರಾಮಯ್ಯ ಸರ್ಕಾರ ತರಾತುರಿಯಲ್ಲಿ 3 ರಿಂದ 6 ತಿಂಗಳೊಳಗೆ ಒಳ ಮೀಸಲಾತಿಯನ್ನು ವರದಿ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ರಾಜ್ಯದ ಪರಿಶಿಷ್ಟ ಜಾತಿಯ 101 ಜಾತಿಗಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತೆ ನಾಗಮೋಹನ್ ದಾಸ್ ಅವರು ಸಿದ್ಧಪಡಿಸಿರುವ ಸಮೀಕ್ಷೆಯ ವರದಿಯು ಅವೈಜ್ಞಾನಿಕತೆಯಿಂದ ಕೂಡಿದ್ದು, ಸಮುದಾಯಕ್ಕೆ ಮಾರಕವಾಗಿದೆ. ಈ ವರದಿಯು ರಾಜ್ಯಪಾಲರಿಂದ ತಿರಸ್ಕೃತವಾಗಿದ್ದು, ಮತ್ತೆ ಅವರ ಬಳಿ ಹೋಗಿದೆ. ನ್ಯಾಯಾಲಯವು ಮೀಸಲು ಪ್ರಮಾಣವನ್ನು ಪ್ರಶ್ನಿಸಿದೆ. ಹಾಗಾಗಿ ಸರ್ಕಾರ ಈ ಒಳ ಮೀಸಲಾತಿಯಲ್ಲಿನ ಅನ್ಯಾಯವನ್ನು ಮನಗಂಡು ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಹಕ್ಕೋತ್ತಾಯಗಳು: ನಾಗಮೋಹನ್ ದಾಸ್ ಸಮಿತಿ ನೀಡಿರುವ ಒಳ ಮೀಸಲಾತಿಯನ್ನು ಕೂಡಲೇ ರದ್ದುಪಡಿಸಬೇಕು. ಶೈಕ್ಷಣಿಕ ಪ್ರವೇಶಾತಿ ವೇಳೆ 3ಕ್ಕಿಂತ ಕಡಿಮೆ ಇದ್ದರೆ ಎಸ್ಸಿ ವರ್ಗವನ್ನು ಸಾಮಾನ್ಯ ಎಂದು ಪರಿಗಣಿಸಬೇಕು. ಸರ್ಕಾರಿ ಉದ್ಯೋಗ ನೇಮಕಾತಿ ವೇಳೆ 3ಕ್ಕಿಂತ ಕಡಿಮೆ ಹುದ್ದೆಗಳು ಎಸ್ಸಿ ವರ್ಗಕ್ಕೆ ಮೀಸಲಾದಾಗ ಈ ವರ್ಗವನ್ನು ಸಾಮಾನ್ಯ ಎಂದು ಪರಿಗಣಿಸಿ ಪರಿಶಿಷ್ಟ ಜಾತಿಯ 101 ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಪರಿಶಿಷ್ಟ ಜಾತಿ ಪ್ರಮಾಣವನ್ನು ಮೊದಲಿನಂತೆ ನೀಡಬೇಕು. ಒಳ ಮೀಸಲಾತಿಗೆ ಅನ್ವಯಿಸಿರುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸಬೇಕು. ಒಳ ಮೀಸಲಾತಿ ವ್ಯತ್ಯಾಸವನ್ನು ಸರಿಪಡಿಸುವ ತನಕ ಯಾವುದೇ ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಬಾರದು ಎಂದು ಪ್ರತಿಭಟನಕಾರರು ಹಕ್ಕೋತ್ತಾಯಿಸಿದರು.
ಬಳಿಕ ಪ್ರತಿಭಟನಕಾರರ ಹಕ್ಕೊತ್ತಾಯದ ಮನವಿಯನ್ನು ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದರು. ಎಎಸ್ಪಿ ಶಶಿಧರ್, ಡಿವೈಎಸ್ಪಿ ಧರ್ಮೇಂದ್ರ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net