ಚಾಮರಾಜನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಕರ್ನಾಟಕ ಸೇನಾ ಪಡೆದ ಮುಖಂಡರು ತಮಿಳುನಾಡು ಹಾಗೂ ಕೇರಳ ರಾಜ್ಯ ಸರ್ಕಾರಗಳ ವಿರುದ್ದ ಭಾನುವಾರ ಪ್ರತಿಭಟನೆ ನಡೆಸಿದರು. ಚಾ.ರಂ.ಶ್ರೀನಿವಾಸಗೌಡ, ಶಾ.ಮುರಳಿ, ಪಣ್ಯದಹುಂಡಿ ರಾಜು, ಸುರೇಶ್ ವಾಜಪೇಯಿ, ರಾಚಪ್ಪ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕನ್ನಡ ಪರ ಸಂಘಟನೆಗಳಿಂದ ಧರಣಿ
ಶ್ರೀಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆ
ಚಾಮರಾಜನಗರ: ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಕನ್ನಡ ವಿರೋಧ ನೀತಿಯನ್ನು ಅನುಸರಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾಪಡೆ ಹಾಗೂ ಕನ್ನಡಪರ ಸಂಘಟನೆಗಳ ವತಿಯಿಂದ ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ತಮಿಳುನಾಡು ಹಾಗೂ ಕೇರಳ ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸ್ ಗೌಡ ಮಾತನಾಡಿ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕನ್ನಡಿಗರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಎರಡು ರಾಜ್ಯ ಸರ್ಕಾರಗಳು ಕನ್ನಡ ವಿರೋಧಿ ಸರ್ಕಾರವಾಗಿದೆ. ತಮಿಳುನಾಡಿನ ಕೆಲ ಕಿಡಿಗೇಡಿಗಳು ಕನ್ನಡ ಬಾವುಟವನ್ನು ಹಾಕಿಕೊಂಡು ಸಂಚರಿಸುವ ವಾಹನಗಳನ್ನು ತಡೆದು ಕನ್ನಡದ ಬಾವುಟಗಳನ್ನು ಕಿತ್ತುಕೊಂಡು ಕನ್ನಡಿಗರ ಮೇಲೆ ನಿರಂತರ ಹಲ್ಲೆ ಮಾಡುತ್ತಿದ್ದಾರೆ ಇದು ಅತ್ಯಂತ ಖಂಡನೀಯ ಎಂದರು.
ಕೇರಳದ ಕಾಸರಗೂಡಿನಲ್ಲಿರುವ ಕನ್ನಡಿಗರ ಮೇಲೆ ಬಲವಂತವಾಗಿ ಮಲಯಾಳಂ ಭಾಷೆಯನ್ನು ಏರಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕೇರಳ ಸರ್ಕಾರ ಕೂಡಲೇ ಈ ಕ್ರಮವನ್ನು ಕೈ ಬಿಡಬೇಕು. ತಮಿಳುನಾಡು ಮತ್ತು ಕೇರಳದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದಬ್ಬಾಳಿಕೆ ನಿಲ್ಲಬೇಕು. ಇಲ್ಲದಿದ್ದರೆ ಕರ್ನಾಟಕ ಪ್ರವೇಶ ಮಾಡುವ ಎರಡು ರಾಜ್ಯಗಳ ವಾಹನಗಳ ಸಂಚಾರ ತಡೆಯು ತ್ತೇವೆ. ಅಲ್ಲದೆ ಎರಡು ರಾಜ್ಯಗಳ ಗಡಿ ಬಂದ್ ಮಾಡಿ, ಕರ್ನಾಟಕ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಯ ಮುಖಂಡರಾದ ಶಾ.ಮುರಳಿ, ಪಣ್ಯದಹುಂಡಿ ರಾಜು, ಸುವರ್ಣ ಕರ್ನಾಟಕ ಅಧ್ಯಕ್ಷ ಸುರೇಶ್ ವಾಜಪೇಯಿ, ರಾಚಪ್ಪ, ರಾ. ಜಗದೀಶ್, ಕೆಂಪರಾಜು, ರಾಜೇಂದ್ರ, ಜಗದೀಶ್, ಲೋಕೇಶ್, ಜಿ.ಮಹೇಶ್, ಸಿದ್ದರಾಜು ಸೇರಿದಂತೆ ಇತರರು ಇದ್ದರು.