ಪೊನ್ನಾಚಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಪೂಜೆ

ಪೊನ್ನಾಚಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕೈಗೊಂಡಿದ್ದ ಶ್ರೀ ಬಸವೇಶ್ವರ ಸ್ವಾಮಿಯ ಮಜ್ಜನಾಭಿಷೇಕಕ್ಕೆ ಮಹಿಳೆಯರು ಶ್ರೀ ಮಹಾಂತೇಶ ಸ್ವಾಮೀಜಿ ಅವರ ನೇತೃತ್ವದಲ್ಲಿ ಕುಂಭ ಕಳಸವನ್ನು ಹೊತ್ತು ತಂದರು.
ಪೊನ್ನಾಚಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕೈಗೊಂಡಿದ್ದ ಶ್ರೀ ಬಸವೇಶ್ವರ ಸ್ವಾಮಿಯ ಮಜ್ಜನಾಭಿಷೇಕಕ್ಕೆ ಮಹಿಳೆಯರು ಶ್ರೀ ಮಹಾಂತೇಶ ಸ್ವಾಮೀಜಿ ಅವರ ನೇತೃತ್ವದಲ್ಲಿ ಕುಂಭ ಕಳಸವನ್ನು ಹೊತ್ತು ತಂದರು.
Published on
ಹನೂರು: ತಾಲೂಕಿನ ಪೊನ್ನಾಚಿ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇಗುಲದಲ್ಲಿ ಸೋಮವಾರ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಮಜ್ಜನಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿದರು.
ಪೊನ್ನಾಚಿ ಭಾಗದಲ್ಲಿ ಹಲವು ಗ್ರಾಮಗಳಿದ್ದು ಅರಣ್ಯ ಪ್ರದೇಶದಿಂದ ಕೂಡಿದೆ. ಇಲ್ಲಿ ಬಹುತೇಕ ಖುಷ್ಕಿ ಭೂಮಿ ಇದ್ದು ರೈತರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಮುಖ್ಯವಾಗಿ ರಾಗಿ ಹಾಗೂ ಮುಸುಕಿನ ಜೋಳ ಬೆಳೆಯುತ್ತಾರೆ. ಈ ಬಾರಿ ಮುಂಗಾರು ಸಂಪೂರ್ಣ ಕೈ ಕೊಟ್ಟಿರುವ ಪರಿಣಾಮ ಬಿತ್ತನೆ ಕಾರ್ಯವೇ ಆಗಿಲ್ಲ. ಇತ್ತ ಅಂತರ್ಜಲ ಮಟ್ಟ ಕುಸಿತದಿಂದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮದ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಮಾರಮ್ಮ ದೇಗುಲವನ್ನು ತಳಿರು-ತೋರಣ, ಹೂಗಳಿಂದ ಸಿಂಗರಿಸಲಾಗಿತ್ತು. ಆಲಂಬಾಡಿ ಮಠದ ಕಿರಿಯ ಶ್ರೀ ಮಹಾಂತೇಶ ಸ್ವಾಮೀಜಿ ಅವರ ನೇತೃತ್ವ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅರ್ಚಕರು ಗೇರಟ್ಟಿ ಗ್ರಾಮದ ಬಾವಿಯಲ್ಲಿ ನೀರು ತುಂಬಿದ ಕುಂಭ ಕಳಸಗಳಿಗೆ ಹಾಗೂ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ಕುಂಭ ಕಳಸವನ್ನು ಹೊತ್ತ ಮಹಿಳೆಯರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಬಸವೇಶ್ವರ ಸ್ವಾಮಿ ದೇಗುಲಕ್ಕೆ ಆಗಮಿಸಿದರು. ಸ್ವಾಮಿಗೆ ಮಜ್ಜನಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿ ಮಹಾ ಮಂಗಳಾರತಿ ಬೆಳಗಿಸುವ ಮೂಲಕ ಗ್ರಾಮಸ್ಥರಿಂದ ಮಳೆಗಾಗಿ ವಿಶೇಷ ಪೂಜೆ ನಡೆಯಿತು.
ಹಾಗೆಯೇ ಮಾರಮ್ಮ ದೇಗುಲದಲ್ಲೂ ವಿಶೇಷ ಪೂಜೆ ಹಾಗೂ ಶ್ರೀ ರಂಗಪ್ಪಸ್ವಾಮಿ ಗದ್ದುಗೆಗೆ ವಾಲಗ ಪೂಜೆ ನೆರವೇರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net