ವ್ಯಾಘ್ರ ಘರ್ಜನೆಗೆ ಬೆಚ್ಚಿದ ತೆರಕಣಾಂಬಿ, ಪುತ್ತನಪುರ ಜನತೆ

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಹುಲಿ ದಾಳಿಯಿಂದ ಸಾವಿಗೀಡಾದ ಚಿರತೆಯ ಕಳೇಬರವನ್ನು ಅರಣ್ಯಾಧಿಕಾರಿಗಳು ವೀಕ್ಷಿಸಿದರು.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಹುಲಿ ದಾಳಿಯಿಂದ ಸಾವಿಗೀಡಾದ ಚಿರತೆಯ ಕಳೇಬರವನ್ನು ಅರಣ್ಯಾಧಿಕಾರಿಗಳು ವೀಕ್ಷಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • tiger
ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಹಾಗೂ ಪುತ್ತನಪುರ ಗ್ರಾಮಗಳಲ್ಲಿ ಹಲವಾರು ದಿನಗಳಿಂದ ಹುಲಿಯ ಚಲನವಲನ ಗೋಚರವಾಗುತ್ತಿದ್ದು, ಗ್ರಾಮಸ್ಥರಲ್ಲಿ ಆಂತಕ ಹೆಚ್ಚಿಸಿದೆ.
ತೆರಕಣಾಂಬಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಗ್ರಾಮದ ಗ್ಯಾಸ್ ಎಜೆನ್ಸಿ ಸಮೀಪವೇ ಹುಲಿಯ ಸದ್ದು ಕೇಳಿದೆ. ಆತಂಕಗೊಂಡ ಗ್ರಾಮಸ್ಥರು ಶಬ್ದವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಳಿಸಿದ್ದಾರೆ. ಧ್ವನಿ ಪರೀಕ್ಷೆ ನಡೆಸಿದ ಅಧಿಕಾರಿಗಳು ಇದು ಹುಲಿಯದ್ದೇ ಎಂದು ಖಚಿತಪಡಿಸಿದ್ದಾರೆ. ಅಲ್ಲದೇ ತಕ್ಷಣ ಸ್ಥಳಕ್ಕೆ ಆಗಮಿಸಿ ಹುಲಿ ಸೆರೆಗೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆದರೆ ಹುಲಿಯ ಸುಳಿವು ಸಿಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಮತ್ತೊಮ್ಮೆ ಕಾಣಿಸಿಕೊಂಡರೆ ಥರ್ಮಲ್ ಡ್ರೋನ್ ಕ್ಯಾಮರಾ ಬಳಸಿ ಸೆರೆ ಹಿಡಿಯಲಾಗುವುದು ಎಂದು ಬಫರ್ ವಲಯದ ಪ್ರಭಾರ ಅರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಪುತ್ತನಪುರ ಗ್ರಾಮದಲ್ಲಿ ಹಾಡಹಗಲೇ ಜಮೀನಿನಲ್ಲಿ ಪ್ರತ್ಯಕ್ಷವಾದ ಹುಲಿಯನ್ನು ಕಂಡು ರೈತರು ಹೆದರಿದ್ದು, ಅರಿಶಿಣ ಬೇಯಿಸುವುದು ಸೇರಿ ಇತರ ಕೃಷಿ ಚಟುವಟಿಕೆ ಕೈಗೊಳ್ಳಲು ಹೊಲದ ಕಡೆಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಅರಿಶಿಣ ಬೆಳೆಗಾರರು ಬೆಳೆ ಕೊಯ್ಲು ಮಾಡಿ ಬೇಯಿಸಿ ಒಣಗಲು ಬಿಟ್ಟಿದ್ದಾರೆ. ಇದರ ಕಾವಲಿಗೆ ರಾತ್ರಿ ವೇಳೆ ತಮ್ಮ ಜಮೀನುಗಳಿಗೆ ಹೋಗಲೇಬೇಕಾದ ಅನಿವಾರ್ಯತೆಯಿದ್ದರೂ ಜೀವಭಯದಿಂದ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರಾದ ಸುರೇಶ್ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವರ್ಷದಿಂದ ತೆರಕಣಾಂಬಿ ಗ್ರಾಮದ ಸುತ್ತಮುತ್ತಲೇ ಸುತ್ತಾಡುತ್ತಿರುವ ಹುಲಿಯು ಕಾಡುಹಂದಿಗಳನ್ನು ಬೇಟೆಯಾಡುತ್ತಿದೆ. ಕಳೆದ ಆರೇಳು ವರ್ಷಗಳಿಂದ ಕೆರೆಗೆ ನೀರು ತುಂಬಿಸಿದ ನಂತರ ಕೆರೆ ಏರಿ ಹಾಗೂ ತಗ್ಗು ಪ್ರದೇಶಗಳಲ್ಲಿ ಭಾರಿ ಪೊದೆಗಳು ಬೆಳೆದಿರುವುದನ್ನು ಹುಲಿ ತನ್ನ ಆವಾಸ ಸ್ಥಾನ ಮಾಡಿಕೊಂಡಿದೆ. ಅಲ್ಲದೆ ಸಮೀಪದಲ್ಲಿರುವ ಕರಿಕಲ್ಲು ಕ್ವಾರಿಗಳು, ಬಫರ್ ವಲಯದ ಸೆಕ್ಷನ್ 4ಗೆ ಸೇರಿದ ಗುಡ್ಡವಿರುವುದರಿಂದ ಹುಲಿ ರಾತ್ರಿ ವೇಳೆ ಸಂಚರಿಸುತ್ತಾ ತನ್ನ ವ್ಯಾಪ್ತಿಯಲ್ಲಿ ಕಾಡುಹಂದಿಗಳು, ಜಮೀನುಗಳಲ್ಲಿ ಕಟ್ಟಿಹಾಕಿರುವ ಹಸುಗಳನ್ನು ಬೇಟೆಯಾಡುತ್ತಿದೆ. ಹುಲಿಯ ಸಂಚಾರದಿಂದ ಈ ಭಾಗದಲ್ಲಿ ವ್ಯಾಪಕವಾಗಿದ್ದ ಚಿರತೆಗಳು ಬೇರೆಡೆಗೆ ಕಾಲ್ಕಿತ್ತಿವೆ. ಕಳೆದ ವಾರ ಗ್ರಾಮದ ಬಲಚವಾಡಿ ರಸ್ತೆಯಲ್ಲಿರುವ ಬಸವನಗುಡಿ ಸಮೀಪ ಹುಲಿ ದಾಳಿ ನಡೆಸಿ ಚಿರತೆಯನ್ನು ಕೊಂದು ಹಾಕಿತ್ತು. ಇದರಿಂದ ಈ ಭಾಗದ ರೈತರು ಬೆಳೆ ರಕ್ಷಣೆಗೆ ರಾತ್ರಿ ವೇಳೆಯಲ್ಲಿ ತಮ್ಮ ಜನೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ.
ಹುಲಿ ಸೆರೆಗೆ ಗ್ರಾಮಸ್ಥರ ಒತ್ತಾಯ: ಹೋಬಳಿ ಕೇಂದ್ರವಾದ ತೆರಕಣಾಂಬಿಯಲ್ಲಿ ಜನ ಸಂಚಾರ ಹೆಚ್ಚಾಗಿರುತ್ತದೆ. ಮೈಸೂರು, ಚಾಮರಾಜನಗರ ಮುಂತಾದ ಕಡೆಗೆ ಹೋಗುವವರು ಬಸ್ಸಿಗಾಗಿ ನಸುಕಿನಲ್ಲಿಯೇ ಗ್ರಾಮಕ್ಕೆ ಆಗಮಿಸುತ್ತಾರೆ. ಪ್ರತಿ ಗುರುವಾರ ನಡೆಯುವ ಸಂತೆಗೆ ಬುಧವಾರ ರಾತ್ರಿಯೇ ಆಗಮಿಸಿ ಸಂತೆ ಬಯಲಲ್ಲಿ ತಂಗುತ್ತಾರೆ. ಆದ್ದರಿಂದ ಅರಣ್ಯ ಇಲಾಖೆ ಕೂಡಲೇ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಬೇಕು. ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net