ಕೊಳ್ಳೇಗಾಲ: ಎನ್‌ಎಂಎಂಎಸ್ (ರಾಷ್ಟ್ರೀಯ ಪುರಸ್ಕಾರ ಶಿಕ್ಷಣ ಶಿಷ್ಯವೇತನ) ಪರೀಕ್ಷೆಯಲ್ಲಿ ಪಟ್ಟಣದ ಮುಡಿಗುಂಡದ ಪಿಎಂಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದ 26 ಮಕ್ಕಳು ಆಯ್ಕೆಗೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.
ಆರ್ಥಿಕವಾಗಿ ದುರ್ಬಲರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಅನುಕೂಲಕ್ಕಾಗಿ ಶಿಷ್ಯವೇತನ ದೊರಕಿಸುವ ಉದ್ದೇಶದಡಿ 8ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳಿಗೆ ಕೇಂದ್ರ ಸರ್ಕಾರ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ನಡೆಸುತ್ತಿದ್ದು, ಪಿಎಂಶ್ರೀ ಆದರ್ಶ ಶಾಲೆಯ 26 ವಿದ್ಯಾರ್ಥಿಗಳು ಸೇರಿ ಜಿಲ್ಲೆಯ ಒಟ್ಟು 95 ಮಕ್ಕಳು ಶಿಷ್ಯವೇತನಕ್ಕೆ ಅರ್ಹತೆ ಪಡೆದಿದ್ದಾರೆ.
ಇದರಲ್ಲಿ ಸ್ಥಳೀಯ ಪಿಎಂಶ್ರೀ ಆದರ್ಶ ವಿದ್ಯಾಲಯದ 26 ವಿದ್ಯಾರ್ಥಿಗಳು ಶಿಷ್ಯವೇತನ ಪಡೆದಿರುವುದು ಶಾಲೆಯ ಕೀರ್ತಿ ಹೆಚ್ಚಿಸಿದೆ. ಪರಿಣಾಮಕಾರಿ ಶಿಕ್ಷಣ, ಉತ್ತಮ ಫಲಿತಾಂಶಕ್ಕೆ ಹೆಸರುವಾಸಿಯಾದ ಆದರ್ಶ ವಿದ್ಯಾಲಯ, ಎನ್‌ಎಂಎಂಎಸ್ ಪರೀಕ್ಷೆಯಲ್ಲೂ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಆಯ್ಕೆಯಾಗುವಂತೆ ಮಾಡಿದ್ದು, ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಸದ್ದು ಮಾಡಿದೆ.
ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸುವ ಜತೆಗೆ ಶಾಲೆಯ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಹಾಗೂ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪ್ರತಿ ವರ್ಷವೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ಜಿಲ್ಲೆಗೆ ಕೀರ್ತಿ ತಂದಿರುವುದನ್ನು ಸ್ಮರಿಸಬಹುದಾಗಿದೆ.
ತಿಂಗಳಿಗೆ 1 ಸಾವಿರ ಶಿಷ್ಯವೇತನ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆಯಲ್ಲಿ ನೆರವಾಗಲು ಹಣಕಾಸಿನ ಸೌಲಭ್ಯ ಕಲ್ಪಿಸುವುದು ಎನ್‌ಎಂಎಂಎಸ್ ಪರೀಕ್ಷೆಯ ಉದ್ದೇಶವಾಗಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳು 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಪ್ರತಿ ತಿಂಗಳು ತಲಾ 1 ಸಾವಿರ ರೂ.ಗಳಂತೆ ವಾರ್ಷಿಕ 12 ಸಾವಿರ ರೂ.ಗಳ ಶಿಷ್ಯವೇತನ ಪಡೆಯಬಹುದಾಗಿದೆ.