ಮಹಾ ಶಿವರಾತ್ರಿ ಜಾತ್ರೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ

ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್ ತೆರಳಿ ಪರಿಶೀಲಿಸಿದರು. ಎ.ಈ. ರಘು, ಚಂದ್ರಶೇಖರ್, ಚಿನ್ನಣ್ಣ ಇತರರಿದ್ದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್ ತೆರಳಿ ಪರಿಶೀಲಿಸಿದರು. ಎ.ಈ. ರಘು, ಚಂದ್ರಶೇಖರ್, ಚಿನ್ನಣ್ಣ ಇತರರಿದ್ದರು.
Published on
ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮಹಾ ಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಮೂಲಸೌಕರ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಮ.ಬೆಟ್ಟದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಂಡಿರುವ ಪ್ರಗತಿಯಲ್ಲಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಮ.ಬೆಟ್ಟದಲ್ಲಿ 5 ದಿನಗಳ ಕಾಲ ಜರುಗುವ ಮಹಾ ಶಿವರಾತ್ರಿ ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಲಿದ್ದಾರೆ. ಹಾಗೆಯೇ ತಮಿಳುನಾಡಿನಿಂದಲೂ ಹೆಚ್ಚಿನ ಭಕ್ತರು ಭೇಟಿ ನೀಡಲಿದ್ದಾರೆ. ಆದ್ದರಿಂದ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ನಮ್ಮ ಕರ್ತವ್ಯ. ಕುಡಿಯುವ ನೀರು, ನೆರಳು, ಶೌಚಗೃಹ, ನಿರಂತರ ದಾಸೋಹ ವ್ಯವಸ್ಥೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಭಕ್ತರಿಗೆ ದೇವರ ದರ್ಶನದಲ್ಲಿ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಒಟ್ಟಿನಲ್ಲಿ ಜಾತ್ರೆಯು ಸುಸೂತ್ರವಾಗಿ ನಡೆಯಬೇಕು ಎಂದು ಸೂಚಿಸಿದರು. ಇದಕ್ಕೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಪ್ರತಿಕ್ರಿಯಿಸಿ, ಮೂಲಸೌಕರ್ಯ ಒದಗಿಸುವ ಸಂಬಂಧ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಜೆಎಸ್‌ಎಸ್ ವಸತಿ ಗೃಹದ ಮುಂಭಾಗ ಸಿಸಿ ರಸ್ತೆ, ದಾಸೋಹ ಭವನ ಮುಂಭಾಗ ರಾಜ ಕಾಲುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಶಾಸಕರು, ಶೀಘ್ರ ಪೂರ್ಣಗೊಳಿಸುವಂತೆ ಪಿಡಬ್ಲ್ಯುಡಿ ಎಇಇ ಚಿನ್ನಣ್ಣ ಅವರಿಗೆ ಸೂಚಿಸಿದರು. ಡಾರ್ಮಿಟರಿ ಹಿಂಭಾಗದ ಖಾಲಿ ಸ್ಥಳಕ್ಕೆ ತೆರಳಿ ಜಾಗವನ್ನು ಸಮತಟ್ಟು ಮಾಡುವುದರ ಮೂಲಕ ಜಾತ್ರೆ ವೇಳೆ ಭಕ್ತರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು. ಅಂತರಗಂಗೆ ಸಮೀಪದ ಚೆಕ್ ಡ್ಯಾಂ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಶಾಸಕರು ಗಿಡ ಗಂಟಿಗಳನ್ನು ತೆರವುಗೊಳಿಸುವುದರ ಜತೆಗೆ ಮಳೆ ನೀರು ಹೆಚ್ಚು ಸಂಗ್ರಹವಾಗಲು ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದರು. ಇದೇ ವೇಳೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಅಗತ್ಯ ಸಲಹೆ ನೀಡಿದರು.
ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಮಾದೇಶ್, ನಾಗರಾಜು ರೆಡ್ಡಿ, ಸುರೇಶ್, ನಾಗಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net