ಗುಂಡಿ ಬಿದ್ದ ರಸ್ತೆಗೆ ಮಣ್ಣು ಹಾಕಿದ ಸ್ಥಳೀಯರು

ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ರಸ್ತೆಯಲ್ಲಿನ ಗುಂಡಿಗಳಿಗೆ ಸ್ಥಳೀಯರು ಮಣ್ಣು ತುಂಬುತ್ತಿರುವುದು.
ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ರಸ್ತೆಯಲ್ಲಿನ ಗುಂಡಿಗಳಿಗೆ ಸ್ಥಳೀಯರು ಮಣ್ಣು ತುಂಬುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿದ್ದು
  • ಶಿವನಸಮುದ್ರದ ಭರಚುಕ್ಕಿ ಜಲಪಾತಕ್ಕೆ ಸಂಪರ್ಕ ಕಲ್ಪಿಸುವ
  • ಜನರೇ ಗುಂಡಿಗಳಿಗೆ ಮಣ್ಣು
ಕೊಳ್ಳೇಗಾಲ: ಸುಪ್ರಸಿದ್ಧ ಶಿವನಸಮುದ್ರದ ಭರಚುಕ್ಕಿ ಜಲಪಾತಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಇದರಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದುದ್ದನ್ನು ಕಂಡು ಜನರೇ ಗುಂಡಿಗಳಿಗೆ ಮಣ್ಣು ಹಾಕುವ ಮೂಲಕ ತೇಪೆ ಹಾಕಿದ್ದಾರೆ.
ಶಿವನಸಮುದ್ರ ಗ್ರಾಮ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸೋದ್ಯಮಕ್ಕೆ ಹೆಸರುವಾಸಿ ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಉತ್ತಮ ರಸ್ತೆಯಿಲದ ಹಿನ್ನೆಲೆಯಲ್ಲಿ ನಿತ್ಯ ಪರದಾಡುವಂತಾಗಿತ್ತು. ಇದೀಗ ಜನರೇ ರಸ್ತೆ ಗುಂಡಿಗಳಿಗೆ ಮಣ್ಣನ್ನು ಹಾಕಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಮಳೆಗಾಲದಲ್ಲಿ ಭೋರ್ಗರೆದು ಧುಮ್ಮಿಕ್ಕುವ ಭರಚುಕ್ಕಿ ಜಲಪಾತ ವೈಭವ ನೋಡಲು ದೇಶ, ವಿದೇಶದಿಂದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಅಂತೆಯೇ ಶಿವನಸಮುದ್ರದ ಆದಿಶಕ್ತಿ ಮಾರಮ್ಮ ದೇವಾಲಯ, ಶ್ರೀ ಮಧ್ಯರಂಗನಾಥ ಸ್ವಾಮಿ ದೇವಾಲಯ, ಚಕ್ರ ಸಮೇತ ಮೀನಾಕ್ಷಿ ದೇವಾಲಯ ಮತ್ತು ದರ್ಗಾ ವೀಕ್ಷಣೆಗೆ ವರ್ಷವಿಡೀ ಜನರು ಆಗಮಿಸುತ್ತಾರೆ. ಆದರೆ ಸುಗಮ ಸಂಚಾರಕ್ಕೆ ಉತ್ತಮ ರಸ್ತೆ ಇಲ್ಲವಾದುದ್ದರಿಂದ ಪ್ರವಾಸಿಗರು ಹೈರಾಣಾಗಿದ್ದರು.
ಇನ್ನು ಶ್ರೀಮದ್ಯರಂಗಸ್ವಾಮಿ ದೇವಾಲಯ ಮತ್ತು ಚಕ್ರ ಸಮೇತ ಮೀನಾಕ್ಷಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿ ಮಯವಾಗಿದ್ದು, ಗುಂಡಿಗಳಲ್ಲಿ ತುಂಬುವ ನೀರಿನ ಮೇಲೆ ವಾಹನಗಳು ಚಲಿಸಿದಾಗ ಕೊಚ್ಚೆ ನೀರು ರಸ್ತೆ ಬದಿಯಲ್ಲಿರುವ ಮನೆಗಳಿಗೆ ಹಾರಿ ಜನರು ತೊಂದರೆ ಅನುಭವಿಸುವಂತಾಗಿತ್ತು. ಆದಿಶಕ್ತಿ ಮಾರಮ್ಮನ ದೇವಾಲಯದಿಂದ ದರ್ಗಾಕ್ಕೆ ತೆರಳುವವರೆಗೂ ಗುಂಡಿ ಹೆಚ್ಚಾಗಿದ್ದು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ.
ಭರಚುಕ್ಕಿ ಫಾಲ್ಸ್ ಮತ್ತು ಸಮೂಹ ದೇವಾಲಯಗಳಂತಹ ಪ್ರಸಿದ್ಧ ತಾಣಗಳಿದ್ದರೂ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ವಹಿಸದಿರುವುದಕ್ಕೆ ಪ್ರವಾಸಿಗರು ಮತ್ತು ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.
ಪ್ರಸಿದ್ಧ ಭರಚುಕ್ಕಿ ಜಲಪಾತಕ್ಕೆ ತೆರುಳುವ ಮುಖ್ಯ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲದಂತಾಗಿದೆ. ಗುಂಡಿ ಬಿದ್ದ ರಸ್ತೆಯಲ್ಲಿಯೇ ಪ್ರವಾಸಿಗರು ತೆರಳಬೇಕು. ಜನಪ್ರತಿನಿಧಿಗಳು ಹಾಗೂ ರಸ್ತೆಗೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿನಿತ್ಯ ರಸ್ತೆಯಲ್ಲಿ ಸಂಚಾರ ಮಾಡುವ ಜನರು ನರಕಯಾತನೆ ಅನುಭ ವಿಸುತ್ತಿದ್ದಾರೆ.
ದಿವ್ಯ ಕುಮಾರ್, ಸತ್ತೇಗಾಲ ನಿವಾಸಿ.
ಶಿವನಸಮುದ್ರದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಮೂರು ದೇವಾಲಯವಿದೆ. ಇದ್ದರಿಂದ ಲಕ್ಷಾಂತರ ರೂ. ಆದಾಯ ಸರ್ಕಾರಕ್ಕೆ ಬರುತ್ತದೆ. ವಿಶ್ವ ಪ್ರಖ್ಯಾತ ಜಲಪಾತವಿದ್ದು ಪ್ರವಾಸೋದ್ಯಮಕ್ಕೆ ಗ್ರಾಮ ಪ್ರಸಿದ್ಧಿಯಾಗಿದೆ. ಇಲ್ಲಿಗೆ ಬರುವ ಜನರಿಗೆ ಕನಿಷ್ಟ ಉತ್ತಮ ರಸ್ತೆಯಿಲ್ಲ. ಶಾಸಕರು, ಸ್ಥಳೀಯ ಜನಪ್ರತಿನಿಧಿಗಳಿಗೆ ಹೇಳಿ ಸಾಕಾಗಿದೆ. ಅಪಘಾತಗಳು ಹೆಚ್ಚಾದ ಕಾರಣ ನಾವೇ ಗುಂಡಿಗಳಿಗೆ ಮಣ್ಣು ಹಾಕಿದ್ದೇವೆ.
ಮಲ್ಲೇಶ್, ಶಿವನಸಮುದ್ರ ಗ್ರಾಮಸ್ಥ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net