ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ತಾಲೂಕಿನಲ್ಲಿ ಶನಿವಾರದಿಂದಲೂ ಮೋಡ ಕವಿದ ವಾತಾವರಣವಿದ್ದು, ಆಗ್ಗಾಗ್ಗೆ ತುಂತುರು ಮಳೆ ಸುರಿಯುತ್ತಲೇ ಇದ್ದು ಭಾನುವಾರವೂ ಮುಂದುವರಿಯಿತು. ಇದರಿಂದ ತಾಲೂಕಿನಾದ್ಯಂತ ಚಳಿಯ ವಾತಾವರಣ ಮನೆ ಮಾಡಿತ್ತು. ಜನರು ಸ್ಪೆಟರ್, ಜರ್ಕಿನ್, ಟೋಪಿ ಹಾಗೂ ಇನ್ನಿತರ ಬೆಚ್ಚನೆಯ ಉಡುಪುಗಳನ್ನು ಧರಿಸುವಂತಾಯಿತು. ಬೆಳಗ್ಗೆ ಹಾಲು ಹಾಗೂ ಪತ್ರಿಕೆ ವಿತರಿಸುವವರು ತುಂತುರು ಮಳೆ ಹಾಗೂ ಚಳಿಯ ನಡುವೆಯೂ ಮನೆಮನೆಗೆ ತೆರಳಿ ಕೊಂಚ ಸಮಸ್ಯೆಯನ್ನು ಎದುರಿಸಿದರು. ಸದ್ಯ ಭಾನುವಾದ್ದರಿಂದ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಮನೆಯಲ್ಲಿಯೇ ಉಳಿಯುವಂತಾಯಿತು.