ನಾಲ್ಕನೇ ಹಂತದ ಕೆರೆಗಳಿಗೆ ನೀರು ತುಂಬಿಸಲಿ

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರ ಜತೆಗೆ ಅಧಿಕಾರಿಗಳು ಚರ್ಚಿಸಿದರು. ಜವರೇಗೌಡ, ಎಂ.ಎಸ್.ತನ್ಮಯ್, ಶಿವಪ್ರಸಾದ್(ರಾಜು), ಸಿ.ಎಸ್.ನಿರಂಜನಕುಮಾರ್, ಮಹೇಶ್, ಮಹದೇವಪ್ರಸಾದ್, ಅಭಿಷೇಕ್ ಗುಡಿಮನೆ, ಸಂಪತ್ತು ಇತರರು ಇದ್ದರು.
ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರ ಜತೆಗೆ ಅಧಿಕಾರಿಗಳು ಚರ್ಚಿಸಿದರು. ಜವರೇಗೌಡ, ಎಂ.ಎಸ್.ತನ್ಮಯ್, ಶಿವಪ್ರಸಾದ್(ರಾಜು), ಸಿ.ಎಸ್.ನಿರಂಜನಕುಮಾರ್, ಮಹೇಶ್, ಮಹದೇವಪ್ರಸಾದ್, ಅಭಿಷೇಕ್ ಗುಡಿಮನೆ, ಸಂಪತ್ತು ಇತರರು ಇದ್ದರು.
Published on

ಗುಂಡ್ಲುಪೇಟೆ:

ನಾಲ್ಕನೇ ಹಂತದ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಅಚ್ಚುಕಟ್ಟು ಪ್ರದೇಶದ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಯಲ್ಲಿ ಸಾಗಿದ ಪ್ರತಿಭಟನಾಕಾರರು ಬೇಕೇ ಬೇಕು, ನೀರು ಬೇಕು ಎಂದು ಘೋಷಣೆ ಕೂಗಿದರು. ಅಲ್ಲದೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.
ನಿರಂತರ ಪ್ರತಿಭಟನೆ, ಧರಣಿ, ಪಾದಯಾತ್ರೆ, ಮನವಿ ಮೂಲಕ ಕೇಳಿಕೊಂಡರೂ 4ನೇ ಹಂತದ ಕೆರೆಗಳನ್ನು ತುಂಬಿಸಿಲ್ಲ. ಇದರಿಂದ ಅಂತರ್ಜಲ ಕುಸಿತವಾಗಿದೆ. ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದೆ ಕೆಲವರು ಕೈ ಚೆಲ್ಲಿದ್ದಾರೆ. ಟ್ಯಾಂಕರ್ ನೀರಿನ ಮೂಲಕ ಬೆಳೆ ಉಳಿಸಿಕೊಳ್ಳುವ ಸವಾಲಿನ ಕೆಲಸವನ್ನು ಮಾಡುತ್ತಿದ್ದೇವೆ. ಮೇವು ಮತ್ತು ನೀರಿನ ಕೊರತೆಯಿಂದ ಹೈನುಗಾರಿಕೆ ನಂಬಿದ ರೈತರು ಮುಂದೇನೆಂದು ಚಿಂತಿಸುವಂತಾಗಿದೆ ಎಂದು ಅಲವತ್ತುಕೊಂಡರು.
ಹಿಂದಿನ ವರ್ಷ ಸಮರ್ಪಕವಾಗಿ ಮಳೆಯಾಗಿಲ್ಲ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯೂ ಆಗಿಲ್ಲ. ಹಿಂಗಾರು ಮಳೆಯಾಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆ ಕೈಬಿಡಲೆಂದು 2025ರ ಡಿಸೆಂಬರ್‌ನಲ್ಲೇ ಕೆರೆಗಳನ್ನು ತುಂಬಿಸುವ ಭರವಸೆ ನೀಡಿದ ಶಾಸಕರು, ಮಾತಿನಂತೆ ನಡೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆ, ಧರಣಿ ಸಂದರ್ಭದಲ್ಲಿ ತಾಂತ್ರಿಕ ಕಾರಣ ಮುಂದು ಮಾಡಲಾಗುತ್ತಿದೆ. 1,2 ಹಾಗೂ 3ನೇ ಹಂತದ ಕೆರೆಗಳಿಗೆ ಪ್ರಾಕೃತಿಕ ಮಾರ್ಗದಲ್ಲಿ ನೀರು ಹರಿಸುವ ಕ್ಷೇತ್ರದ ಶಾಸಕರು ಮತ್ತು ಜಿಲ್ಲಾಡಳಿತ 4ನೇ ಹಂತದ ಕೆರೆಗಳನ್ನು ತುಂಬಿಸಲು ಪೈಪ್‌ಲೈನ್ ಆಗಬೇಕು ಎಂದು ಕಾರಣ ಹೇಳುವುದು ಸರಿಯಲ್ಲ ಎಂದು ಬೇಸರ ಹೊರ ಹಾಕಿದರು.
ಮುಖಂಡ ಅರಕಲವಾಡಿ ಮಹೇಶ್ ಮಾತನಾಡಿ, ಕಳೆದ ವರ್ಷ ರೈತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಡಿ.25 ರಿಂದ ನೀರು ಹರಿಸುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಚ್ಚುಕಟ್ಟು ಪ್ರದೇಶದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೆಚ್ಚಿಸುವ ಸಲುವಾಗಿ ಮೂರನೇ ಹಂತದ ಕೆರೆಗಳಿಗೆ ನೀರು ಹರಿಸದೆ ನಾಲ್ಕನೇ ಹಂತಕ್ಕೆ ಹರಿಸಿದ್ದರು. ಮೂರನೇ ಹಂತದ ರೈತರು ತಮ್ಮ ಭಾಗದ ಕೆರೆಗಳಿಗೆ ನೀರು ಹರಿಸುವಂತೆ ಪ್ರತಿಭಟನೆ ಕೈಗೊಂಡ ಕಾರಣ ಇಲ್ಲಿನ ಕೆರೆಗಳನ್ನು ತುಂಬಿಸದೆ ನೀರು ಹರಿಸುವುದು ನಿಲ್ಲಿಸಿದ್ದಾರೆ. ಆದ್ದರಿಂದ ಇನ್ನಾದರೂ ಜಿಲ್ಲಾಧಿಕಾರಿ ಆಗಮಿಸಿ ನಿಖರವಾದ ಭರವಸೆ ನೀಡುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಧ್ಯಾಹ್ನದ ವೇಳೆಗೆ ಅಪರ ಜಿಲ್ಲಾಧಿಕಾರಿ ಜವರೇಗೌಡ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಮನವಿ ಆಲಿಸಿದರು. ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಹಂತಹಂತವಾಗಿ ಕೆರೆಗಳಿಗೆ ನೀರು ತುಂಬಿಸುವಲ್ಲಿ ವಿಫಲರಾದ ಕಾವೇರಿ ನೀರಾವರಿ ನಿಗಮದ ಎಇಇ ಗುರುಪ್ರಸಾದ್ ಹಾಗೂ ಜೆಇ ಮಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿ, 4ನೇ ಹಂತದ ಕೆರೆಗಳಿಗೆ ನಿರ್ದಿಷ್ಟ ದಿನಾಂಕದಿಂದ ನೀರು ಬಿಡುವ ಬಗ್ಗೆ ಭರವಸೆ ನೀಡಲು ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ನಿಗದಿತ ವೇಳಾಪಟ್ಟಿಯಂತೆ ನೀರು ಬಿಡಲಾಗುತ್ತದೆ ಎಂದರು. ಇದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಆ.19ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ 4ನೇ ಹಂತದ ಯೋಜನೆ ಕೆರೆಗಳಿಗೆ ನೀರು ಹರಿಸುವ ಸಂಬಂಧ ತೀರ್ಮಾನವಾಗುತ್ತದೆ ಎಂದು ಎಡಿಸಿ ಜವರೇಗೌಡ ತಿಳಿಸಿದರು. ಸ್ಪಷ್ಟ ಭರವಸೆ ದೊರೆಯದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಮುಂದುವರೆಸುವ ತೀರ್ಮಾನ ಕೈಗೊಂಡರು. ಈ ವೇಳೆ ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್, ಮುಖಂಡರಾದ ಕೊಡಸೋಗೆ ಶಿವಪ್ರಸಾದ್, ಎಸ್.ಟಿ.ಮಹದೇವಸ್ವಾಮಿ, ಕುಂದಕೆರೆ ಸಂಪತ್ತು, ಅಭಿಷೇಕ್ ಗುಡಿಮನೆ, ಸಿ.ಮಹದೇವಪ್ರಸಾದ್, ಸುನೀಲ್‌ಮೂಡ್ಲು, ಸೋಮಹಳ್ಳಿ ಗುರುಪ್ರಸಾದ್, ಹಂಗಳ ದಿಲೀಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net