ಸರಳ ಸಾಹಿತ್ಯ ಕೃತಿಗಳಿಮೆ ಮೆಚ್ಚುಗೆ ಪಡೆದ ಲಂಕೇಶ್

ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ  ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ವಾಮಿ ಆನಂದ್ ಮಾತನಾಡಿದರು. ಕೆ.ವೆಂಕಟರಾಜು, ಪ್ರಕಾಶರಾಜ್ ಮೇಹು, ಪ್ರೊ.ಬಿ.ಜಯಲಕ್ಷ್ಮಿ, ಎಚ್.ಎಸ್.ಪ್ರೇಮಲತಾ, ಪ್ರೊ.ಎ.ಎಂ.ಶಿವಸ್ವಾಮಿ ಇದ್ದರು.
ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ವಾಮಿ ಆನಂದ್ ಮಾತನಾಡಿದರು. ಕೆ.ವೆಂಕಟರಾಜು, ಪ್ರಕಾಶರಾಜ್ ಮೇಹು, ಪ್ರೊ.ಬಿ.ಜಯಲಕ್ಷ್ಮಿ, ಎಚ್.ಎಸ್.ಪ್ರೇಮಲತಾ, ಪ್ರೊ.ಎ.ಎಂ.ಶಿವಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿಂತಕ ಸ್ವಾಮಿ ಆನಂದ್ ಬಣ್ಣನೆ
  • ಪಿ. ಲಂಕೇಶರ ವ್ಯಕ್ತಿತ್ವ ಉಪನ್ಯಾಸ ಕಾರ್ಯಕ್ರಮ
  • ಹಲವಾರು ಸ್ವಾರಸ್ಯಕರ ಸಂಗತಿಗಳ ಮೆಲುಕು
ಚಾಮರಾಜನಗರ: ಪಿ.ಲಂಕೇಶ್ ಸಾಹಿತ್ಯ ಕೃತಿಗಳಲ್ಲಾಗಲೀ ಅವರ ಭಾಷೆ ಕ್ಲಿಷ್ಟವಾಗಿರುತ್ತಿರಲಿಲ್ಲ, ಬದಲಿಗೆ ಸಂಕ್ಷಿಪ್ತವಾಗಿ, ಸರಳವಾಗಿ ಇರುತ್ತಿದ್ದುದರಿಂದ ಅವರ ಕೃತಿಗಳು ಎಲ್ಲರನ್ನೂ ಸುಲಭವಾಗಿ ತಲುಪುತ್ತಿದ್ದವು. ಇಡೀ ಕರ್ನಾಟಕವನ್ನು ಪ್ರಭಾವಿಸಿದ ಹಲವು ಚಿಂತಕರಲ್ಲಿ ಲಂಕೇಶರು ಸಹ ಒಬ್ಬರು ಅನ್ನುವುದನ್ನು ನಾವು ಮರೆಯಬಾರದು ಎಂದು ಚಿಂತಕ ಸ್ವಾಮಿಆನಂದ್ ಹೇಳಿದರು.
ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಕೋರ ಜಿಲ್ಲಾ ಸಾಹಿತ್ಯ ವಿಚಾರವೇದಿಕೆ ವತಿಯಿಂದ ಪಿ. ಲಂಕೇಶರ ಜನ್ಮದಿನಾಚರಣೆಯ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಪಿ.ಲಂಕೇಶರ ವ್ಯಕ್ತಿತ್ವ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ದಿನಗಳಲ್ಲಿಯೇ ನಾನು ಲಂಕೇಶ್ ಪತ್ರಿಕೆಯ ಗಂಭೀರ ಓದುಗನಾಗಿದ್ದೆ. ಅದರ ಪ್ರಭಾವದಿಂದಲೆ ನಾನೂ ಸಹ ಒಬ್ಬ ಪತ್ರಕರ್ತನಾಗಿ ಸಮಾಜಕ್ಕೆ ಉಪಯುಕ್ತವಾಗುವಂತ ಕೆಲಸ ಮಾಡಬೇಕು ಅಂತ ತೀರ್ಮಾನಿಸಿದೆ. ಅನೇಕ ಬರಹಗಳಿಂದ ಲಂಕೇಶರ ಮೇಲೆ ಹಲವಾರು ಮಾನನಷ್ಟ ಮೊಕದ್ದಮೆಗಳು ದಾಖಲಾಗಿ ಲೆಕ್ಕವಿಲ್ಲದಷ್ಟು ಬಾರಿ ಲಂಕೇಶರು ಕೋರ್ಟಿನ ಕಟಕಟೆಗಳಲ್ಲಿ ನಿಲ್ಲಬೇಕಾಯ್ತು. ಸತ್ವಯುತ, ನ್ಯಾಯಯುತ ವರದಿಗಳಿಂದ ಲಂಕೇಶ್ ಪತ್ರಿಕೆ ಹುಟ್ಟದ್ದಕ್ಕೂ ಸಾರ್ಥಕ ಆಯ್ತು ಅನ್ನುವ ಧನ್ಯತಾಭಾವ ಅವರಲ್ಲಿತ್ತು ಎಂದರು.
ಹಿರಿಯ ಸಾಹಿತಿ ಕೆ.ವೆಂಕಟರಾಜು ಮಾತನಾಡಿ, ಲಂಕೇಶರ ನಾಟಕಗಳ ಪ್ರಾಮುಖ್ಯತೆ, ಅದರಲ್ಲೂ ಗುಣಮುಖ ನಾಟಕ ಕನ್ನಡದ ಶ್ರೇಷ್ಠ ನಾಟಕಗಳಲ್ಲಿ ಒಂದಾಗಿದೆ. ಲಂಕೇಶರು ಕಟ್ಟಿದ ರಾಜಕೀಯ ಸಂಘಟನೆಯಾದ ಪ್ರಗತಿ ರಂಗದ ಸಂದರ್ಭಗಳಲ್ಲಿ ನಡೆದ ಹಲವಾರು ಸ್ವಾರಸ್ಯಕರ ಸಂಗತಿಗಳನ್ನು ಮೆಲುಕು ಹಾಕಿದರು.
ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರಕಾಶರಾಜ್ ಮೇಹು ಮಾತನಾಡಿ, ಸಾಹಿತ್ಯ ಸದಾ ಸಮತೆಗಾಗಿ ಹಾತೊರೆಯಬೇಕು. ಯಾವ ಬರಹವೂ ದೇಶಾತೀತ, ಕಾಲಾತೀತ, ಜಾತ್ಯಾತೀತವಾಗಿ ಮೂಡಿ ಬರುವುದೋ, ಮಾನವೀಯತೆಗಾಗಿ ಮಿಡಿಯುವುದೋ ಅಂತಹ ಸಾಹಿತ್ಯ ಶಾಶ್ವತವಾಗಿ ಉಳಿದು, ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಜಯಲಕ್ಷ್ಮಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಎಚ್.ಎಸ್.ಪ್ರೇಮಲತಾ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಎಂ.ಶಿವಸ್ವಾಮಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net