ಪಟ್ಟಣದಲ್ಲಿ ದಿನೇದಿನೆ ಜನಸಂಖ್ಯೆ ಹೆಚ್ಚುತ್ತಿದೆ. ಆದರೆ ಮೂಲ ಸೌಲಭ್ಯ ನೀಡಬೇಕಾದ ಪಂಚಾಯಿತಿಯ ನಿರ್ವಹಣೆ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಪಟ್ಟಣ ಪಂಚಾಯಿತಿ ಅಸಮರ್ಪಕ ನಿರ್ವಹಣೆಯಿಂದ ಉದ್ಯಾನಗಳು ಸೊರಗಿವೆ. ಹಗಲು, ಸಂಜೆ ವೇಳೆ ಶಾಲಾ ರಜಾ ದಿನಗಳಲ್ಲಿ ಸಮಯ ಕಳೆಯಲು ಇಚ್ಛಿಸುವ ಮಕ್ಕಳಿಗೆ ಇಲ್ಲಿ ಸರಿಯಾದ ಆಟಿಕೆಗಳಿಲ್ಲ. ಮೊಬೈಲ್ ಬಳಕೆ ಹೆಚ್ಚಾಗಿರುವ ದಿನಗಳಲ್ಲಿ ಉದ್ಯಾನದಲ್ಲಿನ ಕೊರತೆಗಳೂ ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಮಕ್ಕಳಿಗೆ ಬೇಕಾಗಿರುವ ಜಾರುಬಂಡಿಯಂತಹ ಆಟಿಕೆ, ಸಾಮಗ್ರಿಗಳ ಕೊರತೆ ಎದ್ದು ಕಾಣುತ್ತಿವೆ. ವಾಕಿಂಗ್ ಪಾತ್‌ನಲ್ಲಿ ಹುಲ್ಲು, ದೊದೆ ಸಸ್ಯಗಳು, ಮುಳ್ಳಿನ ರಾಶಿ ಬೆಳೆದು ಸಂಪೂರ್ಣವಾಗಿ ಮುಚ್ಚಿದೆ. ಸಗಣಿ ಮತ್ತು ಕಸ ಅಲ್ಲಲ್ಲಿ ಬಿದ್ದಿದೆ. ಇಲ್ಲಿಗೆ ಬೀಡಾಡಿ ದನಗಳು, ಹಸು, ಎಮ್ಮೆಗಳು ನುಗ್ಗುತ್ತವೆ. ಪಟ್ಟಣದಲ್ಲಿ ಉದ್ಯಾನಗಳನ್ನು ಪಟ್ಟಣ ಪಂಚಾಯಿತಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಅಕ್ಕಪಕ್ಕದ ಮನೆಗಳ ತ್ಯಾಜ್ಯ ಸುರಿಯಲು ಕೂಡ ಇದನ್ನು ಬಳಕೆ ಮಾಡಲಾಗುತ್ತಿದೆ ಎಂಬುದು ಸಾರ್ವಜನಿಕರ ದೂರಾಗಿದೆ.