ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ 60 ಅತಿಥಿ ಉಪನ್ಯಾಸಕರು ಹಾಗೂ 46 ಬೋಧಕೇತರ ಸಿಬ್ಬಂದಿಗಳು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯಸರ್ಕಾರ ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ 2023-24 ನೇ ಸಾಲಿನಲ್ಲಿ 1 ಕೋಟಿ ರೂ, ಅನುದಾನ, 2024-25 ನೇ ಸಾಲಿನಲ್ಲಿ 43.42 ಲಕ್ಷ ರೂ, ಅನುದಾನ ಹಾಗೂ 2025-26 ನೇ ಸಾಲಿನಲ್ಲಿ 1 ಕೋಟಿ ರೂ, ಅನುದಾನವನ್ನು ನೀಡಿದೆ. ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರು ಅಧಿವೇಶನದಲ್ಲಿ ಚುಕ್ಕಿಗುರುತಿನ ಪ್ರಶ್ನೆಯಲ್ಲಿ ಗಮನಸೆಳೆದಿದ್ದು, ಸರ್ಕಾರ ಮಾಹಿತಿಯನ್ನು ನೀಡಿದೆ. ಆದರೆ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಅತಿಥಿ ಉಪನ್ಯಾಸಕರಿಗೆ ವೇತನವನ್ನು ನೀಡಲಾಗುತ್ತಿದೆ ಹೊರತು ಸರ್ಕಾರ ನೀಡುತ್ತಿರುವ ಅನುದಾನದಿಂದ ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ವಿದ್ಯಾರ್ಥಿಗಳ ಪ್ರವೇಶಾತಿ, ಮೂಲಸೌಕರ್ಯಗಳ ಕೊರತೆ, ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ವಿವಿ ವಿಲೀನದ ಮಾತುಗಳು ಕೂಡ ಕೇಳಿಬರುತ್ತಿದೆ. ಆಗಾಗಿ ಈ ವಾರದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.