ಹನೂರು: ತಾಲೂಕಿನ ವೈಶಂಪಾಳ್ಯ-ನಂಜೇಒಡೆಯರದೊಡ್ಡಿ, ಕಣ್ಣೂರು-ಹುಲುಗುಡ್ಡೆ ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ ಹನೂರಿನ ಜಿ.ವಿ. ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಡಿಟೋರಿಯಂ, ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಕಣ್ಣೂರು ಗ್ರಾಮದಲ್ಲಿ ಆಯೋಜಿಸಿದ್ದ ಭೂಮಿಪೂಜೆಯ ವೇಳೆ ಶಾಸಕರು ಸುದ್ದಿಗಾರದೊಂದಿಗೆ ಮಾತನಾಡಿ, ಕಣ್ಣೂರಿನಿಂದ ಹನೂರಿಗೆ ಸಂಪರ್ಕ ಕಲ್ಪಿಸುವ ಹುಲುಸುಗುಡ್ಡೆ ಮಾರ್ಗದ ರಸ್ತೆಯು ಕಳೆದ ಹಲವು ವರ್ಷಗಳಿಂದ ತೀರಾ ಹಾಳಾಗಿತ್ತು. ಇದರಿಂದ ಮಳೆಗಾಲದ ವೇಳೆ ಸಾರ್ವಜನಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದರು.
ಹಾಗೆಯೇ ವೈಶಂಪಾಳ್ಯ ಗ್ರಾಮದ ಡಾಂಬರೀಕರಣದ ರಸ್ತೆಯು ಸಹ ಹದಗೆಟ್ಟಿತ್ತು. ರಸ್ತೆ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಇದನ್ನು ಮನಗಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಪ್ರಕೃತಿ ವಿಕೋಪ ಅನುದಾನದ 1 ಕೋಟಿ ರೂ. ವೆಚ್ಚದಲ್ಲಿ ವೈಶಂಪಾಳ್ಯ ಹಾಗೂ 80 ಲಕ್ಷ ರೂ. ವೆಚ್ಚದಲ್ಲಿ ಕಣ್ಣೂರು ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಇನ್ನು ಜಿ.ವಿ.ಗೌಡ ಕಾಲೇಜಿನಲ್ಲಿ ಆಡಿಟೋರಿಯಂ ಹಾಗೂ ಗ್ರಂಥಾಲಯ ಕಟ್ಟಡವಿಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಎಸ್‌ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ಕರ್ನಾಟಕ ಗೃಹ ಮಂಡಳಿ ವತಿಯಿಂದ 1.68 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ವೈಶಂಪಾಳ್ಯದಲ್ಲಿ ರೈತರು ಗ್ರಾಮದ ಮೂಲಕ ಹಾದು ಹೋಗಿರುವ ಹಳ್ಳಕ್ಕೆ ನೀರು ಹರಿಸುವುದರ ಮೂಲಕ ಕೃಷಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಪಿಎಸಿಸಿ ನಿರ್ದೇಶಕ ಮಂಜೇಶ್, ಮುಖಂಡರಾದ ಸಿದ್ದೇಗೌಡ, ಮುಖಂಡರಾದ ಮೂರ್ತಿ, ಮಹದೇವಪ್ಪ, ಪ್ರಭುಸ್ವಾಮಿ, ಸೆಲ್ವಂ, ಭೈರನತ್ತ ರಾಜು, ಮೈಕಲ್, ರಾಜಣ್ಣ, ಚಿನ್ನರಾಜು ಹಾಗೂ ಇನ್ನಿತರರಿದ್ದರು.