ಯಳಂದೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜಾನಪದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಸನ್ಮಾನಿಸಿದರು.
ಚಾಮರಾಜನಗರ ಜಿಲ್ಲೆ ಜಾನಪದ ಸಂಪತ್ತಿನ ಭಂಡಾರವಾಗಿದ್ದು, ಇದನ್ನು ಪೋಷಿಸಲು ಯುವ ಸಮೂಹ ಮುಂದಾಗಬೇಕಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ರಂಗದೇಗುಲ ಕಲಾ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಜಾನಪದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆದಿಮಾನವ ಕಾಲದಿಂದಲೂ ಒಂದೊಂದು ಸ್ಥಳದಲ್ಲಿ ಒಂದೊಂದು ಸಂಸ್ಕೃತಿ ಬೇರು ಬಿಟ್ಟಿದೆ. ಸಂಸ್ಕೃತಿ, ಆಚಾರ-ವಿಚಾರಗಳು ಅವರು ಅನುಸರಿಸುತ್ತಿದ್ದ ನೀತಿ ನಿಯಮಗಳು ವಿಭಿನ್ನವಾಗಿದೆ. ಈ ವಿಚಾರದಲ್ಲಿ ನಮ್ಮ ಜಿಲ್ಲೆ ಸಮೃದ್ಧವಾಗಿದೆ. ಇಡೀ ಜಗತ್ತಿನಲ್ಲಿ ಫಿನ್‌ಲ್ಯಾಂಡ್‌ನ ಕಲೈವಾಲಾ ಜಾನಪದ ಬಿಟ್ಟರೆ ಎರಡನೇ ಅತಿ ದೊಡ್ಡ ಜಾನಪದ ಕಾವ್ಯ ನಮ್ಮ ಮಲೆಮಹದೇಶ್ವರರ ಕಾವ್ಯವಾಗಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.
ಗೀಗಿಪದ, ರಾಗಿಕಲ್ಲು ಪದ, ಸೋಬಾನೆ ಪದ ಸೇರಿದಂತೆ ಸಂಗೀತದ ಅನೇಕ ಪ್ರಾಕಾರಗಳನ್ನು ಹೇಳುವ ಕಲಾವಿದರು ನಮ್ಮ ಜಿಲ್ಲೆಯಲ್ಲಿದ್ದು, ಇದನ್ನು ಪೋಷಿಸಿ ಬೆಳೆಸಲು ಇಂದಿನ ಪೀಳಿಗೆ ಮುಂದಾಗಬೇಕು ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ನಮ್ಮ ಕಲೆ ನಮ್ಮ ಸಂಸ್ಕೃತಿ ಪೋಷಿಸುವ ಕೆಲಸವನ್ನು ಕಲಾವಿದರು ಮಾಡಬೇಕು ಎಂದರು.