ಹೆದ್ದಾರಿಗಳಲ್ಲಿ ನಾಮಫಲಕ ಅಳವಡಿಸಿ

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಶ್ರೀರೂಪಾ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ಗಾಯತ್ರಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರೇಣುಕಾ, ಕೆಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ. ನಾಗರಾಜು ಇತರರಿದ್ದರು.
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಶ್ರೀರೂಪಾ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ಗಾಯತ್ರಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರೇಣುಕಾ, ಕೆಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ. ನಾಗರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ
  • ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ
ಚಾಮರಾಜನಗರ: ಜಿಲ್ಲಾ ವ್ಯಾಪ್ತಿಗೆ ಒಳಪಡುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಡುಬ್ಬ, ತಿರುವುಗಳು, ಕೂಡು ರಸ್ತೆಗಳ ಬಗ್ಗೆ ವಾಹನ ಚಾಲಕರು, ಸವಾರರಿಗೆ ಮಾರ್ಗದರ್ಶನ ಮಾಡುವ ನಾಮಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಸುರಕ್ಷಿತ ಚಾಲನೆಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಚಾಲಕರಿಗೆ ಮಾರ್ಗದರ್ಶನ ಮಾಡುವ ಫಲಕಗಳನ್ನು ಎದ್ದು ಕಾಣುವಂತೆ ಅಳವಡಿಸಬೇಕು. ಪಟ್ಟಣದ ಹೊರ ವಲಯದ ಹೆದ್ದಾರಿಗಳಲ್ಲಿ ವಿದ್ಯುತ್ ದೀಪ ವ್ಯವಸ್ಥೆ ಇರಬೇಕು. ಸುರಕ್ಷತಾ ದೃಷ್ಠಿಯಿಂದ ಈ ಕೆಲಸ ಆದ್ಯತೆ ಮೇರೆಗೆ ಅಗಬೇಕು. ಇದರಿಂದ ಅನೇಕ ಸಮಸ್ಯೆಗಳು ತಪ್ಪಲಿವೆ ಎಂದು ತಿಳಿಸಿದರು.
ಅಪಘಾತ ಪ್ರಕರಣಗಳ ತಡೆಗಾಗಿ ಚಾಲಕರಿಗೆ ವಿಶೇಷವಾದ ತರಬೇತಿ ನೀಡಬೇಕಿದೆ. ಕೆಎಸ್‌ಆರ್‌ಟಿಸಿ ವತಿಯಿಂದಲೂ ಸಂಸ್ಥೆಯ ಚಾಲಕರಿಗೆ ಸುರಕ್ಷಿತ ಚಾಲನೆಗಾಗಿ ತರಬೇತಿ ಮಾರ್ಗದರ್ಶನ ಮಾಡುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು. ಮಲೆಮಹದೇಶ್ವರಬೆಟ್ಟ ಭಾಗಕ್ಕೆ ತೆರಳುವ ಬಸ್ಸಿನ ಚಾಲಕರಿಗೆ ಜಾಗರೂಕವಾಗಿ ಚಾಲನೆ ಮಾಡಲು ಸೂಚಿಸಬೇಕು ಎಂದರು.
ಬಿಳಿಗಿರಿರಂಗನ ಬೆಟ್ಟದ ರಸ್ತೆಯ ಇಕ್ಕೆಲಗಳಲ್ಲಿ ಸಣ್ಣಪುಟ್ಟ ಗುಂಡಿಗಳನ್ನು ಮುಚ್ಚಬೇಕು. ಇದರಿಂದ ವಾಹನಗಳ ಸುರಕ್ಷಿತ ಸಂಚಾರಕ್ಕೆ ಅವಕಾಶವಾಗಲಿದೆ. ಲೋಕೋಪಯೋಗಿ ಇಲಾಖೆ, ಕೆ.ಎಸ್.ಆರ್.ಟಿಸಿ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಹೆದ್ದಾರಿಗಳಲ್ಲಿ ಬರುವ ಜನಸಂದಣಿ ಗ್ರಾಮಗಳಲ್ಲಿ ರಸ್ತೆ ದಾಟುವುದರಿಂದ ಅಪಘಾತಕ್ಕೆ ಕಾರಣವಾಗುತ್ತದೆ. ಇದಕ್ಕಾಗಿ ನಿಗದಿತ ಸ್ಥಳ ಗುರುತು ಮಾಡಬೇಕು. ಎಲ್ಲೆಂದಲ್ಲಿ ರಸ್ತೆ ದಾಟದಿರಲು ರಸ್ತೆ ಬದಿಯಲ್ಲಿ ರೈಲಿಂಗ್ಸ್ ಬ್ಯಾರಿಕೇಡ್‌ಗಳನ್ನು ಹಾಕಬೇಕು. ಕೆಲವೆಡೆ ಕ್ರಾಸ್ ಬ್ಯಾರಿಯರ್‌ಗಳನ್ನು ಕಿತ್ತುಹಾಕಿ ರಸ್ತೆ ಸುರಕ್ಷತೆಗೆ ಅಡ್ಡಿಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು ಎಂದರು.
ಗುಂಡ್ಲುಪೇಟೆ ಭಾಗದಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ತಡೆಗಾಗಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಿತಿಮೀರಿದ ಸಾಗಾಣಿಕೆ ವಾಹನಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆರ್.ಟಿ.ಒ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು. ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ನಗರ, ಪಟ್ಟಣ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆ, ಫುಟ್‌ಪಾತ್ ಗಳ ನಿರ್ಮಾಣ, ಸಂಚಾರಿ ವ್ಯವಸ್ಥೆಗಳನ್ನು ಕೈಗೊಳ್ಳುವಾಗ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರುವ ಬಗ್ಗೆ ಪರಿಶೀಲನೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ಇಬ್ಬರಿಗಿಂತ ಹೆಚ್ಚು ಸವಾರರು ವಾಹನಗಳಲ್ಲಿ ಸಂಚರಿಸುವುದನ್ನು ತಡೆಗಟ್ಟಿ ದಂಡ ವಿಧಿಸಬೇಕು. ಹೆದ್ದಾರಿಗಳಲ್ಲಿ ವಾಹನ ಸವಾರರ ಸುರಕ್ಷಿತ ಚಾಲನೆಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ಮಾತನಾಡಿ, ಗುಂಡ್ಲುಪೇಟೆ ಭಾಗದಲ್ಲಿ ಹೆಚ್ಚಾಗಿ ಅಪಘಾತ ಪ್ರಕರಣಗಳು ಸಂಭವಿಸುತ್ತಿವೆ. ಮಲೆ ಮಹದೇಶ್ವರಬೆಟ್ಟ ಭಾಗದಲ್ಲಿ ಕೆಎಸ್.ಆರ್.ಟಿಸಿ ಬಸ್ಸುಗಳು ಅಪಘಾತಕ್ಕೀಡಾಗುತ್ತಿವೆ. ಇಲ್ಲಿನ ವಾಹನ ಚಾಲಕರಿಗೆ ಹೆಚ್ಚಿನ ಜಾಗೃತಿ ತರಬೇತಿ ನೀಡುವ ಅಗತ್ಯವಿದೆ. ಹೆದ್ದಾರಿಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್. ಗಾಯತ್ರಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರೇಣುಕಾ, ಕೆಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ. ನಾಗರಾಜು, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬಿ.ವಿ. ವೆಂಕಟೇಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಾಂತಮ್ಮ, ತಾಂತ್ರಿಕ ಸಹಾಯಕ ಬಿ. ಮಾದೇಶ್, ನಗರಾಭಿವೃದ್ದಿ ಪ್ರಾಧಿಕಾರದ ಸಹಾಯಕ ಇಂಜಿನಿಯರ್ ಎಂ.ಎಚ್. ರಿತೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net