ಪುಷ್ಪ ಪ್ರದರ್ಶನದಲ್ಲಿ ಇಂಡಿಯಾ ಗೇಟ್ ಮಾದರಿ

ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ಈ ಹಿಂದೆ ಆಯೋಜಿಸಿದ್ದ ಲಪುಷ್ಪ ಪ್ರದರ್ಶನದಲ್ಲಿ ಮೂಡಿಬಂದಿದ್ದ ಕಲಾಕೃತಿಗಳು.
ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ಈ ಹಿಂದೆ ಆಯೋಜಿಸಿದ್ದ ಲಪುಷ್ಪ ಪ್ರದರ್ಶನದಲ್ಲಿ ಮೂಡಿಬಂದಿದ್ದ ಕಲಾಕೃತಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಜ.26 ರಿಂದ 28 ರವರೆಗೆ ಆಯೋಜನೆ
  • ಗಣರಾಜ್ಯೋತ್ಸವ ದಿನಾಚರಣೆ ವಿಶೇಷ
  • ಮರಳಿನಲ್ಲಿ ಮೂಡಲಿರುವ ಸಾಲುಮರದ ತಿಮ್ಮಕ್ಕ
ಚಾಮರಾಜನಗರ: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಆಯೋಜಿಸಲಿರುವ ಈಬಾರಿಯ ಲಪುಷ್ಪ ಪ್ರದರ್ಶನದಲ್ಲಿ ಇಂಡಿಯಾ ಗೇಟ್ ಕಲಾಕೃತಿ ಪ್ರದರ್ಶನಗೊಳ್ಳಲಿದೆ.
ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಇನ್ನಿತರೆ ಇಲಾಖೆಗಳ ಸಹಯೋಗದಲ್ಲಿ ಪ್ರತಿವರ್ಷವೂ ಗಣರಾಜ್ಯೋತ್ಸವದ ದಿನಾಚರಣೆ ಅಂಗವಾಗಿ ಆಯೋಜಿಸಲಿರುವ ಲಪುಷ್ಪ ಪ್ರದರ್ಶನವನ್ನು ಜ.26 ರಿಂದ 28 ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಿದ್ದ ಲಪುಷ್ಪ ಪ್ರದರ್ಶನಗಳಲ್ಲಿ ಮಲೆಮಹದೇಶ್ವರ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಮರಳಲ್ಲಿ ಮೂಡಿಬಂದಿದ್ದ ಕಾಂತಾರ ಕಲಾಕೃತಿ, ಜೋಡಿ ಆನೆಗಳು ಹಾಗೂ ಇನ್ನಿತರೆ ಲಪುಷ್ಪ ಕಲಾಕೃತಿಗಳು ನೋಡುಗರ ಗಮನವನ್ನು ಸೆಳೆದಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ವಿವಿಧ ಕಲಾಕೃತಿಗಳ ಮುಂದೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದರು. ಕಲಾಕೃತಿಗಳ ಸೊಬಗನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ಸಾಲಿನ ಲಪುಷ್ಪ ಪ್ರದರ್ಶನದಲ್ಲಿ ಇಂಡಿಯಾ ಗೇಟ್ ಮಾದರಿಯನ್ನು ನಿರ್ಮಾಣ ಮಾಡಲು ತೋಟಗಾರಿಕೆ ಇಲಾಖೆ ವತಿಯಿಂದ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಅದರಂತೆ ಇಂಡಿಯಾಗೇಟ್ ಕಲಾಕೃತಿಗೆ ನೂರಾರು ಬಗೆಯ ಪುಷ್ಪಗಳನ್ನು ಬಳಕೆ ಮಾಡಲಾಗುತ್ತಿದೆ. ಇದರೊಂದಿಗೆ ನೂರಾರು ಬಗೆಯ ಪುಷ್ಪಗಳಿಂದಾದ ಬೃಹತ್ ಆನೆ ಕಲಾಕೃತಿ ಮತ್ತು ಸಿರಿಧಾನ್ಯಗಳ ಕಲಾಕೃತಿಯನ್ನು ಪ್ರದರ್ಶನ ಮಾಡಲಾಗುತ್ತದೆ ಎಂದು ತೋಟಕಾರಿಗೆ ಇಲಾಖೆಯ ಉಪನಿರ್ದೇಶಕ ಶಿವಪ್ರಸಾದ್ ಅವರು ವಿಜಯವಾಣಿಗೆ ಮಾಹಿತಿ ನೀಡಿದರು.
ಹಣ್ಣು-ತರಕಾರಿಗಳಿಂದ ಕಲಾಕೃತಿ:
ಕಲ್ಲಂಗಡಿ, ಕುಂಬಳಕಾಯಿ, ಸೋರೆಕಾಯಿ, ಬಾಳೆ, ಕ್ಯಾರೆಟ್, ಹೂ ಕೋಸ್, ಆಲೂಗೆಡ್ಡೆ ಹಾಗೂ ಇನ್ನಿತರೆ ಹಣ್ಣು ಮತ್ತು ತರಕಾರಿಗಳಿಂದ ವಿವಿಧ ಬಗೆಯ ಕಲಾಕೃತಿಗಳನ್ನು ರಚನೆ ಮಾಡಲಾಗುತ್ತಿದೆ. ವಿವಿಧ ಕ್ಷೇತ್ರಗಳ ಗಣ್ಯರು, ರಾಜಕಾರಣಿಗಳು, ಅಧಿಕಾರಿಗಳು, ಸಾಧಕರ ಚಿತ್ರಗಳನ್ನು ಹಣ್ಣುಗಳಲ್ಲಿ ಕೆತ್ತನೆಮಾಡಲಾಗುತ್ತಿದೆ. ಇದರೊಟ್ಟಿಗೆ ವೆರ್ಟಿಕಲ್ ಗಾರ್ಡನ್ ನಿರ್ಮಾಣ ಮಾಡಲಾಗುತ್ತಿದೆ. ಅದಲ್ಲದೇ ಜಿಲ್ಲೆಯ ರೈತರು ಬೆಳೆದ ಹಣ್ಣು, ತರಕಾರಿ, ಹೂವುಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಮಾರಿಗೋಲ್ಡ್, ಸೇಲೋಸಿಯಾ, ಜಿನ್ನಿಯಾ, ಸೆಲೇವಿಯಾ, ಪೆಟೂನಿಯಾ, ಪ್ಲೋಕ್ಸ್, ವಿಂಕಾ ರೋಸಿಯಾ, ಬಾಲ್ಸಮ್ ಎಂಬ ವಿಶೇಷ ಬಗೆಯ ಹೂವಿನ ಗಿಡಗಳನ್ನು ಬಳಕೆ ಮಾಡಲಾಗುತ್ತಿದೆ. ಅದಲ್ಲದೇ ತಾಂತ್ರಿಕ ಬೇಸಾಯ ಪದ್ಧತಿಗಳಾದ ಅಣಬೆ ಬೇಸಾಯ, ಜೇನು ಕೃಷಿ, ಸಮಗ್ರ ಮತ್ತು ಸಾವಯವ ಬೇಸಾಯ ಪದ್ಧತಿ ಹಾಗೂ ಪರಿಗಳ ಪ್ರದರ್ಶನ ಇರಲಿದೆ. ಹಣ್ಣು ಮತ್ತು ಅಲಂಕಾರಿಕ ಗಿಡಗಳ ಮಾರಾಟ ಮಳಿಗೆಯನ್ನು ತೆರೆಯಲಾಗುತ್ತಿದೆ.
ಮರಳಿನಲ್ಲಿ ಮೂಡಲಿರುವ ತಿಮ್ಮಕ್ಕ:
ಈ ಬಾರಿಯ ಲಪುಷ್ಪ ಪ್ರದರ್ಶನದಲ್ಲಿ ಪದ್ಮಶ್ರೀ ಪುರಸ್ಕೃತ ಪರಿಸರ ಪ್ರೇಮಿ ದಿ.ಸಾಲುಮರದ ತಿಮ್ಮಕ್ಕ ಅವರ ಕಲಾಕೃತಿ ಮರಳಿನಲ್ಲಿ ಮೂಡಿ ಬರಲಿದೆ. ಸಾಲುಮರದ ತಿಮ್ಮಕ್ಕ ಅವರ 70 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಈಶ್ವರಿ ಅಕಾಡೆಮಿ ಸೋಷಿಯಲ್ ಟ್ರಸ್ಟ್ ವತಿಯಿಂದ ಚಾಮರಾಜನಗಕ್ಕೆ ಕರೆಸಲಾಗಿತ್ತು. ಅವರು 250 ಗಿಡಗಳನ್ನು ನೆಡುವ ಮೂಲಕ ಪರಸರ ಕಾಳಜಿಯನ್ನು ಸಾರಿದ್ದರು. ಇತ್ತೀಚೆಗೆ ನಮ್ಮನ್ನು ಅಗಲಿದ ಮಹಾ ಚೇತನವನ್ನು ಸ್ಮರಿಸುವ ನಿಟ್ಟಿನಲ್ಲಿ ಲಪುಷ್ಪ ಪ್ರದರ್ಶನದ ಭಾಗವಾಗಿ ಮರಳಿನಲ್ಲಿ ಸಾಲು ಮರದ ತಿಮ್ಮಕ್ಕ ಕಲಾಕೃತಿ ಮೂಡಿಬರಲಿದೆ. ಇದು ಪ್ರದರ್ಶನಕ್ಕೆ ಪರಿಸರ ಪ್ರೇಮಿಗಳನ್ನು ಹೆಚ್ಚಾಗಿ ಆಕರ್ಷಿಸಲಿದೆ.
ಸೆಲ್ಫಿ ಪಾಯಿಂಟ್ ನಿರ್ಮಾಣ:
ಲಪುಷ್ಪ ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರನ್ನು ಮತ್ತಷ್ಟು ಆಕರ್ಷಿಸುವ ಸಲುವಾಗಿ ಸೆಲ್ಪಿ ಪಾಯಿಂಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಎಲ್ಲಾ ಬಗೆಯ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡುವುದು ಸಾಮಾನ್ಯವಾಗಿದ್ದು, ಲಪುಷ್ಪ ಪ್ರದರ್ಶನದಲ್ಲೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತವಾಗಿ, ಜನರನ್ನು ಆಕರ್ಷಿಸುವ ಸೆಲ್ಫಿಪಾಯಿಂಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದಲ್ಲದೇ ಸುಮಾರು 5000 ಹೂವಿನ ಕುಂಡಗಳ ಜೋಡಣೆಯನ್ನು ಮಾಡಲಾಗುತ್ತಿದ್ದು, ಇದು ಸಾರ್ವಜನಿಕರನ್ನು ಹೆಚ್ಚಾಗಿ ಆಕರ್ಷಿಸುವ ನಿರೀಕ್ಷೆ ಇದೆ. ತೋಟಗಾರಿಕೆ, ಕೃಷಿ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಇನ್ನಿತರೆ ಇಲಾಖೆಗಳ ಮಳಿಗೆಗಳನ್ನು ತೆರೆದು ಸಾರ್ವಜನಿಕರಿಗೆ ಹಾಗೂ ರೈತರಿಗೆ ಯೋಜನೆಗಳ ಕುರಿತು ಒದಗಿಸಲಾಗುತ್ತದೆ. ವೈಜ್ಞಾನಿಕ ಬೇಸಾಯದ ಕುರಿತು ಪ್ರಾತ್ಯಕ್ಷಿಕೆ, ವಿವಿಧ ಯಂತ್ರೋಪಕರಣಗಳ ಉಪಯುಕ್ತ ಮಾಹಿತಿಯನ್ನು ಒದಗಿಸಲಾಗುತ್ತದೆ.
ಈ ಬಾರಿಯ ಲಪುಷ್ಪ ಪ್ರದರ್ಶನವನ್ನು ಜ.26 ರಿಂದ 28 ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ವಿಶೇಷವಾಗಿ ಇಂಡಿಯಾಗೇಟ್ ನಿರ್ಮಾಣ ಮಾಡಲಾಗುತ್ತಿದೆ. ಅದಲ್ಲದೇ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರ ಕಲಾಕೃತಿ ಮರಳಿನಲ್ಲಿ ಮೂಡಿ ಬರಲಿದೆ. ಹಣ್ಣು ಮತ್ತು ತರಕಾರಿಗಳಿಂದ ಆಕರ್ಷಿಕ ಕಲಾಕೃತಿಗಳು ಮೂಡಿಬರಲಿದೆ.
ಶಿವಪ್ರಸಾದ್, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಚಾಮರಾಜನಗರ
ಈ ಬಾರಿಯ ಲಪುಷ್ಪ ಪ್ರದರ್ಶನದಲ್ಲಿ ಸಾಲುಮರದ ತಿಮ್ಮಕ್ಕ ಅವರ ಕಲಾಕೃತಿಯನ್ನು ನಿಮರ್ಅಣ ಮಾಡುವ ಮೂಲಕ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಪರಿಸರ ಪ್ರೇಮವನ್ನು ಮೂಡಿಸಲು ಮುಂದಾಗಿರುವುದು ಸ್ವಾಗತಾರ್ಹ. ನಾವಂತೂ ಇಂಡಿಯಾಗೇಟ್ ಮತ್ತು ತಿಮ್ಮಕ್ಕನ ಕಲಾಕೃತಿ ವೀಕ್ಷಣೆ ಮಾಡಲು ಕಾತರದಿಂದ ಕಾಯುತ್ತಿದ್ದೇವೆ.
ಸಿ.ಎಂ.ವೆಂಕಟೇಶ್, ಪರಿಸರ ಪ್ರೇಮಿ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net