ಚಿಂಚಳ್ಳಿ ಗ್ರಾಮದಲ್ಲಿ ಅದ್ದೂರಿ ಕೊಂಡೋತ್ಸವ

 ಚಿಂಚಳ್ಳಿ ಗ್ರಾಮದಲ್ಲಿ ವಿವಿಧ ದೇವರುಗಳ ಕೊಂಡೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಚಿಂಚಳ್ಳಿ ಗ್ರಾಮದಲ್ಲಿ ವಿವಿಧ ದೇವರುಗಳ ಕೊಂಡೋತ್ಸವವು ವಿಜೃಂಭಣೆಯಿಂದ ನೆರವೇರಿತು.
Published on
ಹನೂರು: ತಾಲೂಕಿನ ಚಿಂಚಳ್ಳಿ ಗ್ರಾಮದಲ್ಲಿ ಮಾರಮ್ಮನ ಜಾತ್ರೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಶ್ರೀಕೆಂಡಗಣ್ಣಸ್ವಾಮಿ, ಶ್ರೀ ಬಸವೇಶ್ವರಸ್ವಾಮಿ, ಶ್ರೀವೀರಭದ್ರಸ್ವಾಮಿ ಹಾಗೂ ಶ್ರೀಮೂಗು ಬಸವೇಶ್ವರಸ್ವಾಮಿಯ ಕೊಂಡೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮದ ಬೀದಿಗಳನ್ನು ತಳಿರು, ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಗ್ರಾಮದ ಮಾರಮ್ಮನ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಅಲಗುಮೂಲೆಗೆ ತೆರಳಿದ ಗ್ರಾಮಸ್ಥರು ಸತ್ತಿಗೆ, ಸೂರಿಪಾನಿ, ನಂದಿಕಂಬ ಹಾಗೂ ವಾದ್ಯಮೇಳದೊಂದಿಗೆ ಮೆರವಣಿಗೆಯ ಮೂಲಕ ದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತು ತಂದರು. ಗ್ರಾಮದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.
ಬಳಿಕ ದೇಗುಲದ ಮುಂಭಾಗ ಸಿದ್ಧಪಡಿಸಲಾಗಿದ್ದ ಕೊಂಡಕ್ಕೆ ಅರ್ಚಕರು ವಿಶೇಷ ಪೂಜೆಯನ್ನು ಸಲ್ಲಿಸಿದರು. ಉಪವಾಸವಿದ್ದ ಅರ್ಚಕರು ವೀರಾವೇಶದಿಂದ ಕೊಂಡ ಹಾಯ್ದರು. ಈ ವೇಳೆ ನೆರೆದಿದ್ದ ಸಾವಿರಾರು ಭಕ್ತರು ಘೋಷಣೆ ಕೂಗುತ್ತಾ ಕೊಂಡ ಹಾಯುವವರಲ್ಲಿ ಉತ್ಸಾಹ ಮೂಡಿಸಿದರು.
ಹನೂರು ತಾಲೂಕಿನ ವಿವಿಧ ಗ್ರಾಮದ ಭಕ್ತರು ಸೇರಿದಂತೆ ಮೈಸೂರು, ಬೆಂಗಳೂರು, ಮಂಡ್ಯ, ಚಾಮರಾಜನಗರ ಹಾಗೂ ಇನ್ನಿತರ ಜಿಲ್ಲೆಗಳಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು.
ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ನಡೆಯಿತು. ಮಂಗಳವಾರ ಸಂಜೆ ಮಾರಮ್ಮ ದೇವಿಗೆ ಭಕ್ತರು ತಂಪುಜ್ಯೋತಿಯನ್ನು ಸಮರ್ಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net