ಹನೂರು: ತಾಲೂಕಿನ ಸಂದನಪಾಳ್ಯ ಗ್ರಾಮ ವ್ಯಾಪ್ತಿಯ ಕೀರೆಪಾತಿ ಡ್ಯಾಂ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಶಾಸಕ ಎಂ.ಆರ್.ಮಂಜುನಾಥ್ ಗ್ರಾಮಸ್ಥರ ಜತೆಗೂಡಿ ಬಾಗಿನ ಅರ್ಪಿಸಿದರು.
ತಾಲೂಕಿನಲ್ಲಿ ಈ ವರ್ಷ ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಕೀರೆಪಾತಿ ಡ್ಯಾಂನಲ್ಲಿ ನೀರಿನ ಪ್ರಮಾಣ ತೀವ್ರ ಕುಸಿದಿತ್ತು. ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಜನರು ತೊಂದರೆ ಪಡುವಂತಾಗಿತ್ತು. ಕೀರೆಪಾತಿ ಡ್ಯಾಂಗೆ ನೀರು ತುಂಬಿಸುವ ಮೂಲಕ ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರು ಶಾಸಕ ಎಂ.ಆರ್.ಮಂಜುನಾಥ್ ಅವರಲ್ಲಿ ಮನವಿ ಸಲ್ಲಿಸಿದ್ದರು.
ಈ ಸಂಬಂಧ ಭರವಸೆ ನೀಡಿದ್ದ ಶಾಸಕರು, ತಾಲೂಕಿನ ಉಡುತೊರೆ ಜಲಾಶಯದಿಂದ ಕೀರೆಪಾತಿಗೆ ನೀರು ತುಂಬಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಅಧಿಕಾರಿಗಳು 17 ದಿನಗಳ ಕಾಲ ಉಡುತೊರೆ ಜಲಾಶಯದಿಂದ ಹಳ್ಳದ ಮೂಲಕ ನೀರು ಹರಿಸಿದ್ದು, ಭಾನುವಾರ ಭರ್ತಿಯಾಗಿತ್ತು.
ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ಸಂಬಂಧಿಸಿದಂತೆ ನೀರಾವರಿ ಯೋಜನೆಯೊಂದನ್ನು ರೂಪಿಸಲಾಗಿದ್ದು, ಅನುಷ್ಠಾನಗೊಳಿಸುವ ಸಂಬಂಧ ಸರ್ಕಾರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಶಾಸಕ ಮಂಜುನಾಥ್ ತಿಳಿಸಿದರು.
ಸ್ಥಳೀಯ ಮುಖಂಡರಾದ ಸಂಧ್ಯಾಗೂ, ಮಾಣಿಕ್ಯ, ಸಗಾಯರಾಜ್, ಚಾರ್ಲೇಸ್, ಸೂಸೈರಾಜ್, ಜಾನ್, ಗಣೇಶ್, ಅರ್ಮುಗಂ, ಸೇಸುರಾಜು, ಕ್ರಿಸ್ತರಾಜ್ ಇತರರು ಇದ್ದರು.